ಮಡಿಕೇರಿಯಲ್ಲಿ ಪೊಲೀಸ್ ಹುದ್ದೆ ಆಯ್ಕೆ ಪ್ರಕ್ರಿಯೆ

December 16, 2020

ಮಡಿಕೇರಿ ಡಿ.16 : ಕೊಡಗು ಜಿಲ್ಲಾ ಸಶಸ್ತ್ರ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 50 ಪುರುಷ ಪೊಲೀಸ್ ಸಿಬ್ಬಂದಿಗಳ ಹುದ್ದೆಯ ಭರ್ತಿಗಾಗಿ ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಹಿಂದೆ ನಡೆಸಲಾದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ 197 ಮಂದಿ ಪುರುಷರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. 23 ಮಂದಿ ಮಾಜೀ ಸೈನಿಕರು ಕೂಡ ಪಾಲ್ಗೊಂಡಿದ್ದರು. ಮೊದಲಿಗೆ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಲಾಯಿತು. ಬಳಿಕ 1600 ಮೀಟರ್ ಓಟ ಏರ್ಪಡಿಸಲಾಗಿತ್ತು. ನಿಗಧಿತ ಸಮಯದಲ್ಲಿ ಗುರು ತಲುಪಿ ಉತ್ತೀರ್ಣರಾದ ಅಭ್ಯರ್ಥಿಗಳ ಎತ್ತರ, ಎದೆಯ ಸುತ್ತಳತೆ ಪರಿಶೀಲನೆ ನಡೆಸಲಾಯಿತು. ತದನಂತರ ಲಾಂಗ್ ಜಂಪ್, ಹೈ ಜಂಪ್, ಶಾಟ್ ಪುಟ್ ಮತ್ತಿತ್ತರ ದೈಹಿಕ ಸಹಿಷ್ಣುತಾ ಪರೀಕ್ಷೆಗಳನ್ನು ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಮೈಸೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವ ಕುಮಾರ್ ಅವರುಗಳು ಸ್ಥಳದಲ್ಲಿ ಹಾಜರಿದ್ದು, ಎಲ್ಲಾ ಪರೀಕ್ಷೆಗಳ ಮೇಲ್ವಿಚಾರಣೆ ನಡೆಸಿದರು.
ಮೈಸೂರು, ಧಾರವಾಡ, ಹುಬ್ಬಳ್ಳಿ, ಬೆಳಗಾಂ ಸೇರಿದಂತೆ ಮತ್ತಿತ್ತರ ಕಡೆಗಳಿಂದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲದೇ ಕೊಡಗು ಜಿಲ್ಲಾ ಸಶಸ್ತ್ರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಮಹಾರಾಷ್ಟ್ರದಿಂದಲೂ ಓರ್ವ ಅಭ್ಯರ್ಥಿ ದೈಹಿಕ ಸಾಮಥ್ರ್ಯ ಮತ್ತು ಸಹಿಷ್ಣುತಾ ಪರೀಕ್ಷೆಯಲ್ಲಿ ಭಾಗವಹಿಸಿದ್ದ. ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್, ಸೋಮವಾರಪೇಟೆ ಡಿವೈಎಸ್‍ಪಿ ಶೈಲೇಂದ್ರ, ವೃತ್ತ ನಿರೀಕ್ಷಕರಾದ ದಿವಾಕರ್, ಅನೂಪ್ ಮಾದಪ್ಪ, ನಗರ ಠಾಣಾಧಿಕಾರಿ ಕು. ಅಂತಿಮ, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಜಿಲ್ಲಾ ಪೊಲೀಸ್ ಆಡಳಿತ ವಿಭಾಗದ ಸಿಬ್ಬಂದಿಗಳು ಆಯ್ಕೆ ಪ್ರಕ್ರಿಯೆಯ ಸಂದರ್ಭ ಹಾಜರಿದ್ದರು.

error: Content is protected !!