ಖ್ಯಾತ ಉದ್ಯಮಿ ಆರ್ಎನ್ ಶೆಟ್ಟಿ ನಿಧನ

ಬೆಂಗಳೂರು ಡಿ. 17 : ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದ್ದ ಖ್ಯಾತ ಉದ್ಯಮಿ ಆರ್.ಎನ್. ಶೆಟ್ಟಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರೂ ಆಗಿರುವ ಆರ್.ಎನ್. ಶೆಟ್ಟಿ ಅವರಿಗೆ 92 ವರ್ಷವಾಗಿತ್ತು. ಅವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಆರ್ಎನ್ಎಸ್ ತಾಂತ್ರಿಕ ವಿದ್ಯಾಲಯ ಕಾಲೇಜಿನ ಆವರಣದಲ್ಲಿ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗುವುದು.
1928ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರುಡೇಶ್ವರದಲ್ಲಿ ಹುಟ್ಟಿದ ಆರ್.ಎನ್. ಶೆಟ್ಟಿ ಉದ್ಯಮಿಯಾಗಿ ಯಶಸ್ವಿಯಾದರು. ತಮ್ಮ ಹುಟ್ಟೂರಾದ ಮುರುಡೇಶ್ವರದಲ್ಲಿ ಸಮುದ್ರ ತೀರದಲ್ಲಿ ಬೃಹತ್ ಶಿವನ ಮೂರ್ತಿ, ಎತ್ತರದ ರಾಜಗೋಪುರವನ್ನು ಸ್ಥಾಪಿಸಿ, ಮುರುಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಆ ಜಾಗವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿದ ಹೆಗ್ಗಳಿಕೆಯೂ ಆರ್.ಎನ್. ಶೆಟ್ಟಿ ಅವರದ್ದು. ಆರ್.ಎನ್. ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
