ಅಂಗನವಾಡಿ ಕಟ್ಟಡಕ್ಕೆ ನಿವೇಶನ ನೀಡಲು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಒತ್ತಾಯ

December 17, 2020

ಮಡಿಕೇರಿ ಡಿ. 17 : ನಗರದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಸರ್ಕಾರಿ ನಿವೇಶನ ಲಭ್ಯವಿದ್ದರೂ ಖಾಸಗಿ ಕಟ್ಟಡ ಅಥವಾ ಮನೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದ್ದು, ಸ್ವಂತ ಕಟ್ಟಡ ಹೊಂದಲು ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ ಒತ್ತಾಯಿಸಿದ್ದಾರೆ.
ನಗರದ ಪೆನ್‍ಷನ್ ಲೈನ್ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಹೊಂದಲು ನಿವೇಶನ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು ಲಭ್ಯವಿರುವ ಸರ್ಕಾರಿ ಜಾಗವನ್ನು ಸದ್ಬಳಕೆ ಮಾಡುವಂತೆ ಕೋರಿದರು.
ಪೆನ್‍ಷನ್ ಲೈನ್ ಅಂಗನವಾಡಿ ಕೇಂದ್ರವನ್ನು ಮನೆಯೊಂದರಲ್ಲಿ ನಡೆಸಲಾಗುತ್ತಿದೆ. ಇದರಿಂದ ಸರ್ಕಾರಕ್ಕೂ ಹೊರೆಯಾಗಲಿದ್ದು, ಸ್ವಂತ ಕಟ್ಟಡ ಹೊಂದುವುದು ಸೂಕ್ತವಾಗಿದೆ. ಬ್ಲಾಕ್ 11ರ ಸರ್ವೆ ಸಂಖ್ಯೆ 415ರಲ್ಲಿ ಆರು ಸೆಂಟ್ ಪೈಸಾರಿ ಖಾಲಿ ಜಾಗವಿದ್ದು, ಇದರಲ್ಲಿ ಮೂರು ಸೆಂಟ್ ನಿವೇಶನವನ್ನು ಅಂಗನವಾಡಿ ಕೇಂದ್ರಕ್ಕಾಗಿ ಮೀಸಲಿಡಬೇಕೆಂದು ಪಾರ್ವತಿ ಫ್ಯಾನ್ಸಿ ಒತ್ತಾಯಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಆಸಕ್ತಿ ತೋರಬೇಕೆಂದು ತಿಳಿಸಿದರು.

error: Content is protected !!