ಸಂಪಾಜೆಯಲ್ಲಿ ಬಿಜೆಪಿ ಸಭೆ : ಸರ್ಕಾರವನ್ನು ಮತ್ತಷ್ಟು ಬಲಪಡಿಸಬೇಕಿದೆ : ಸಚಿವ ವಿ.ಸೋಮಣ್ಣ

December 17, 2020

ಮಡಿಕೇರಿ ಡಿ.17 : ಬಿಜೆಪಿ ಕಾರ್ಯಕರ್ತರೇ ಪಕ್ಷದ ಜೀವ ನಾಡಿಗಳಾಗಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಬೇಕಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಸಂಪಾಜೆಯಲ್ಲಿ ಪಕ್ಷ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ ಸಚಿವ ವಿ.ಸೋಮಣ್ಣ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಸಿಎಂ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಬಿಜೆಪಿ ಸರಕಾರಗಳ ತಳಪಾಯವನ್ನು ಮತ್ತಷ್ಟು ಬಲಪಡಿಸಲು ಗ್ರಾಮ ಪಂಚಾಯಿತಿ ಚುನಾವಣೆಗಳು ಭೂಮಿಕೆಯಾಗಿದೆ. ಕೇಂದ್ರ ಸರಕಾರದ ಅನುದಾನಗಳು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ನೀಡುವ ಮೂಲಕ ಗ್ರಾಮಗಳ ಅಭಿವೃದ್ದಿ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಮೋದಿ ಸರಕಾರ ಆಧ್ಯತೆ ನೀಡಿದೆ. ಇದೀಗ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೊಡುಗೆಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಇದಕ್ಕೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆ ಮೂಲಕ ಕೊಡಗು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ಪ್ರಾಬಲ್ಯ ಸಾಧಿಸಬೇಕಿದೆ. ಪಕ್ಷದ ಕಾರ್ಯಕರ್ತರು ಆ ದಿಶೆಯಲ್ಲಿ ಕಾರ್ಯೋನ್ಮುಖವಾಗುವಂತೆ ಸಚಿವ ಸೋಮಣ್ಣ ಸಲಹೆ ನೀಡಿದರು. ಸಂಪಾಜೆ, ಪೆರಾಜೆ ಮತ್ತು ಚೆಂಬು ಗ್ರಾಮ ಪಂಚಾಯಿತಿಗಳ 28 ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧಿಸುತ್ತಾರೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, 2015ರ ವರೆಗೂ ಕೇಂದ್ರದ ಅನುದಾನ ಆಯಾ ಜಿಲ್ಲಾ ಪಂಚಾಯಿತಿಗಳ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆಯಾಗುತ್ತಿತ್ತು. ಆದರೆ 16ನೇ ಹಣಕಾಸು ಯೋಜನೆಯ ಮೂಲಕ ಕೇಂದ್ರದ ಅನುದಾನ ನೇರವಾಗಿ ಆಯಾ ಗ್ರಾಮ ಪಂಚಾಯಿತಿಗಳಿಗೆ ತಲುಪುವಂತೆ ಮಾಡಿದ ಕೀರ್ತಿ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ. ಇದರಿಂದಾಗಿ ಪ್ರತಿ ಪಂಚಾಯಿತಿಗೆ ಕನಿಷ್ಟ 20 ಲಕ್ಷ ರೂ. ಅನುದಾನ ಲಭ್ಯವಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ಯೋಜನೆಗಳು ಮಾತ್ರ ರಾಜ್ಯ ಸರಕಾರದಿಂದ ಅನುಷ್ಟಾನವಾಗುತ್ತಿದೆ. ಇನ್ನುಳಿದ ಎಲ್ಲಾ ಯೋಜನೆಗಳಿಗೆ ಕೇಂದ್ರ ಸರಕಾರವೇ ಅನುದಾನ ನೀಡುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದರು. 2022ರಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಕೊಡಗು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ, ತಾ.ಪಂ ಹಾಗೂ ಜಿಲ್ಲಾ ಪಂಚಾಯಿತಿಯ ಎಲ್ಲಾ ಸೀಟುಗಳು ಬಿಜೆಪಿಯ ವಶವಾಗಬೇಕಿದೆ. ಆ ಮೂಲಕ ಕೊಡಗು ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎಂಬ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ಹೇಳಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಸಂಪಾಜೆ, ಪೆರಾಜೆ ಮತ್ತು ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಪಟ್ಟ ಭದ್ರ ಶಕ್ತಿಗಳು ಹಣದ ಪ್ರಭಾವ ಬಳಸಿ ಚುನಾವಣೆ ಗೆಲ್ಲಲು ಹವಣಿಸುತ್ತಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರು ಇದಕ್ಕೆ ಅವಕಾಶ ನೀಡದೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಎಲ್ಲಾ ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಕೊಡಗು ಜಿಲ್ಲೆ ಕೂಡ ಬಿಜೆಪಿಯ ಭದ್ರ ಕೋಟೆ ಎಂದು ಗುರುತಿಸಿಕೊಂಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇದು ಮತ್ತೊಮೆ ಸಾಬೀತಾಗಬೇಕಿದೆ ಎಂದು ಹೇಳಿದರು.
ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ದಬ್ಬಡ್ಕ ರಸ್ತೆ ಮತ್ತು ಸಂಪರ್ಕ ಸೇತುವೆ ನಿರ್ಮಾಣಕ್ಕಾಗಿ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಗೆ ಪರ್ಯಾಯ 37 ಎಕರೆ ಭೂಮಿ ನೀಡಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಅರಣ್ಯದಂಚಿನ ಗ್ರಾಮಗಳ ಆದಿವಾಸಿಗಳಿಗೂ ಮೂಲ ಸೌಕರ್ಯಗಳನ್ನು ನೀಡಬೇಕಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿದರು. ವೇದಿಕೆಯಲ್ಲಿ ಮಡಿಕೇರಿ ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾ ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಬಿ.ಬಿ. ಭಾರತೀಶ್, ಪಕ್ಷದ ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ಸುಬ್ರಮಣ್ಯ ಉಪಾಧ್ಯಾಯ, ಕಾಂಗೀರ ಸತೀಶ್, ನಾಪಂಡ ರವಿ ಕಾಳಪ್ಪ, ಅಶ್ವಿನ್, ಮಾದಪ್ಪ, ತಳೂರು ಕಿಶೋರ್ ಕುಮಾರ್ ಹಾಜರಿದ್ದರು.

error: Content is protected !!