ಕೊಡಗು : ಸರಕಾರಿ ಆದೇಶದ ಉಲ್ಲಂಘನೆ : ನಾಲ್ವರು ಅಭ್ಯರ್ಥಿಗಳ ವಿರುದ್ಧ ಮೊಕದ್ದಮೆ

December 17, 2020

ಮಡಿಕೇರಿ: ಗ್ರಾಮ ಪಂಚಾಯತಿ ಸಂಬಂಧ ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ ಆರೋಪದಡಿ ನಾಲ್ವರು ಅಭ್ಯರ್ಥಿಗಳ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಸೋಮವಾರಪೇಟೆ ತಾಲೂಕಿನ ಹುಲುಗುಂದ ಗ್ರಾಮದ ಭಾಸ್ಕರ ನಾಯಕ್ ಎಂಬವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1973ರ ಪ್ರಕರಣ7(2)ಕ್ಕೆ ವಿರುದ್ಧವಾಗಿ ರಾಜಕೀಯ ಮುಖಂಡರ ಜೊತೆಗಿನ ಛಾಯಾಚಿತ್ರ ಮತ್ತು ಕಿರುಹೊತ್ತಿಗೆಯನ್ನು ಮುದ್ರಿಸಿ ಅದರಲ್ಲಿ ವೈಯಕ್ತಿಕವಾಗಿ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಉಲ್ಲೇಖಿಸಿ ಪ್ರಚಾರ ಮಾಡುವ ಮೂಲಕ ಸರಕಾರಿ ಆದೇಶವನ್ನು ಉಲ್ಲಂಘಿಸಿರುವುದಾಗಿ ಆರೋಪಿಸಲಾಗಿದೆ.
ಮತ್ತೊಂದೆಡೆ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದ ಅಬ್ದುಲ್ ರಶೀದ್, ಕಾವೇರಮ್ಮ, ಮಿಶ್ರಿಯಾ ಅವರುಗಳು ಕಾಂಗ್ರೆಸ್ ಪಕ್ಷದ ಚಿಹ್ನ ಬಳಸಿ ಸಾಮಾಜಿಕ ಜಾಲ ತಾಣಗಳಲ್ಲಿ (ಭಾವಚಿತ್ರ ಮತ್ತು ವೀಡಿಯೋ) ಮಊಲಕ ಪ್ರಚಾರ ಕೈಗೊಂಡು  ಸರಕಾರಿ ಆದೇಶವನ್ನು ಉಲ್ಲಂಘಿಸಿರುವುದಾಗಿ ದೂರಲಾಗಿದೆ.
ಈ ಎರಡೂ ಪ್ರಕರಣಗಳಲ್ಲಿ ಭಾರತೀಯ ದಂಡ ಸಂಹಿತೆ, 1860 ರ ಕಲಂ.188 ರ ಮೇರೆಗೆ ಕುಶಾಲನಗರ ಮತ್ತು ಮಡಿಕೇರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿ ಆರೋಪಿಗಳ ವಿರುದ್ಧ ಸಂಬಂಧಪಟ್ಟ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅನೀಸ್‍ಕಣ್ಮಣಿ ಜಾಯ್ ತಿಳಿಸಿದ್ದಾರೆ.

error: Content is protected !!