ಪಾಲಿಬೆಟ್ಟ ಗ್ರಾ.ಪಂ ಚುನಾವಣೆ : ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ !

December 17, 2020

ಮಡಿಕೇರಿ ಡಿ.17 : ಗ್ರಾಮ ಪಂಚಾಯಿತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಅಪರೂಪದ ಘಟನೆ ಕೊಡಗು ಜಿಲ್ಲೆಯ ಪಾಲಿಬೆಟ್ಟ ಪಂಚಾಯಿತಿಯಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಪಿ.ಬೋಪಣ್ಣ ಜೈಲಿನಿಂದ ನಾಮಪತ್ರ ಸಲ್ಲಿಸಿದವರಾಗಿದ್ದಾರೆ.
ಪಾಲಿಬೆಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎರಡು ಅವಧಿಯಲ್ಲಿ (10 ವರ್ಷ) ಸೇವೆ ಸಲ್ಲಿಸುವುದರೊಂದಿಗೆ ಸ್ವಚ್ಛ ಭಾರತ್ ಅಭಿಯಾನದಡಿ ಪಂಚಾಯತ್ ರಾಷ್ಟ್ರ ಪ್ರಶಸ್ತಿ ಬೋಪಣ್ಣ ಕಾರಣರಾಗಿದ್ದರು.
ಈ ಬಾರಿಯೂ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದ ಅವರು ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಜಾಮೀನು ಪಡೆಯಲು ಮಡಿಕೇರಿಯ ವಕೀಲರ ಸಂಘದ ಅಧ್ಯಕ್ಷ ಕವನ್ ಅವರ ಮೂಲಕ ಕೊನೆ ಕ್ಷಣದವರೆಗೆ ಪ್ರಯತ್ನಿಸಿದರೂ ಜಾಮೀನು ಸಿಗದ ಹಿನ್ನೆಲೆಯಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ.
ಕೊನೆಗೆ ನ್ಯಾಯಾಲಯದ ಒಪ್ಪಿಗೆ ಪಡೆದು ಸೂಚಕರ ಸಹಾಯದಿಂದ ಅವರು ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಪಂಚಾಯತಿಯ ಸದಸ್ಯ ಧರ್ಮಜ ಉತ್ತಪ್ಪ ನಾಮಪತ್ರ ಸಲ್ಲಿಕೆಗೆ ಅಗತ್ಯವಾದ ವ್ಯವಸ್ಥೆ ಮಾಡಿದರು.

error: Content is protected !!