ಸಂತ್ರಸ್ತರ ಮನೆ ತೆರವುಗೊಳಿಸಲು ಕಾಲಾವಕಾಶ ಬೇಕು : ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಮನವಿ

18/12/2020

ಮಡಿಕೇರಿ ಡಿ.18 : ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರ ಹಳೆಯ ಮನೆಗಳನ್ನು ತೆರವುಗೊಳಿಸುವಂತೆ ನಗರಸಭೆ ಆದೇಶಿಸಿದ್ದು, ತೆರವು ಕಾರ್ಯಚರಣೆಗೆ ಕಾಲಾವಕಾಶ ನೀಡಬೇಕೆಂದು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ.
ನಗರಸಭಾ ಪೌರಾಯುಕ್ತ ರಾಮದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದ ವೇದಿಕೆ ಪ್ರಮುಖರು ಹಾಗೂ ಸಂತ್ರಸ್ತರು 2018ರಲ್ಲಿ ಸಂಭವಿಸಿದ ಪ್ರಾಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಇಂದಿರಾನಗರ, ಚಾಮುಂಡೇಶ್ವರಿ ನಗರ, ಜ್ಯೋತಿನಗರದ ನಿವಾಸಿಗಳಿಗೆ ಮಾದಾಪುರದ ಜಂಬೂರಿನಲ್ಲಿ ಪುನರ್‍ವಸತಿಯನ್ನು ಕಲ್ಪಿಸಿ ಕೆಲವು ತಿಂಗಳುಗಳಷ್ಟೇ ಆಗಿದೆ. ಇದೀಗ ಸಂತ್ರಸ್ತರ ಹಳೆಯ ಮನೆಗಳನ್ನು ತೆರವುಗೊಳಿಸುವ ಬಗ್ಗೆ ನಗರಸಭೆ ಪ್ರಸ್ತಾಪಿಸಿದ್ದು, ಇದು ಸರಿಯಾದ ಕ್ರಮವಲ್ಲವೆಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯ ಸಂತ್ರಸ್ತರು ಕೂಲಿಕಾರ್ಮಿಕರಾಗಿದ್ದು, ಕೊರೋನಾ ಸಮಯದಲ್ಲಿ ಕೆಲಸವಿಲ್ಲದೆ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆ ಕೆಡವಲು ಕನಿಷ್ಠ 10 ರಿಂದ 15 ಸಾವಿರ ರೂ. ಖರ್ಚಾಗುವುದರಿಂದ ಮೂರು ತಿಂಗಳ ಕಾಲಾವಕಾಶ ಬೇಕೆಂದು ಮನವಿ ಮಾಡಿದರು.
ವೇದಿಕೆಯ ಅಧ್ಯಕ್ಷ ರವಿಗೌಡ, ಸದಸ್ಯರುಗಳಾದ ರೀಟಾ, ಲಿಲ್ಲಿ, ಕಸ್ತೂರಿ, ಕಲೀಮ್, ಸಂಧ್ಯಾ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.