ಕ್ರಿಸ್‍ಮಸ್ ಹಾಗೂ ನೂತನ ಹೊಸ ವರ್ಷ ಆಚರಣೆ : ಸರ್ಕಾರದ ಮಾರ್ಗಸೂಚಿ ಪಾಲಿಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

December 19, 2020

ಮಡಿಕೇರಿ ಡಿ.19 : ಇದೇ ಡಿ. 25 ರಂದು ಕ್ರಿಸ್‍ಮಸ್ ಹಾಗೂ ನೂತನ ಹೊಸ ವರ್ಷ ಆಚರಣೆ ಸಂಬಂಧ ಕೋವಿಡ್-19 ಹಿನ್ನೆಲೆ ಸರ್ಕಾರದ ಮಾರ್ಗಸೂಚಿ ಪಾಲಿಸುವ ಬಗ್ಗೆ ಕ್ರಿಶ್ಚಿಯನ್ ಧಾರ್ಮಿಕ ಮುಂಖಂಡರು, ಹೋಟೆಲ್ ಹಾಗೂ ರೆಸಾರ್ಟ್ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಂದಿನ ವಾರ ಕ್ರಿಸ್‍ಮಸ್ ಹಾಗೂ ಹೊಸ ವರ್ಷ ಹಬ್ಬದಂದು ಕೋವಿಡ್-19 ಹಿನ್ನೆಲೆ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಜಿಲ್ಲಾಡಳಿತದ ಜೊತೆ ಕೈಜೋಡಿಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದರು.
ಕ್ರೈಸ್ತ ಧರ್ಮದ ಚರ್ಚ್‍ಗಳಲ್ಲಿ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ಹಬ್ಬದ ಆಚರಣೆ ಸಂಧರ್ಭದಲ್ಲಿ ಕೋವಿಡ್-19 ಸಾಂಕ್ರಮಿಕ ಸೋಂಕು ತಡೆಗಟ್ಟುವಲ್ಲಿ ಹಸ್ತಲಾಘನ ಮಾಡಬಾರದು. ಡಿಸೆಂಬರ್ 30 ರಿಂದ 2021 ರ ಜನವರಿ 02 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಹಾಗೂ ಅದೇ ತೆರೆನಾದ ಸ್ಥಳ, ಪ್ರದೇಶಗಳಲ್ಲಿ ಹೆಚ್ಚು ಜನರು ಸೇರಬಾರದು ಎಂದು ಜಿಲ್ಲಾಧಿಕಾರಿ ಅವರು ಕೋರಿದರು.
ಡಿಜೆ ಡ್ಯಾನ್ಸ್, ಕಾರ್ಯಕ್ರಗಳನ್ನು, ವಿಶೇಷ ಪಾರ್ಟಿಯನ್ನು ನಿಷೇದಿಸಲಾಗಿದೆ. ಹೊಸ ವರ್ಷ ಆಚರಣೆ ಸಂದಂರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯ ರಸ್ತೆಗಳಲ್ಲಿ ಮತ್ತು ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆಯನ್ನು ನಿಷೇಧಿಸಿದೆ. ಪ್ರತಿ ನಿತ್ಯದ ಸಾಮಾನ್ಯ ಚಟುವಟಿಕೆಯನ್ನು ಕೈಗೊಳ್ಳಲು ನಿರ್ಭಂಧವಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಸರ್ಕಾರದ ಆದೇಶದಂತೆ ದಿನಾಂಕ 27-11-2020 ರಲ್ಲಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅದರಂತೆ ಬಹು ಮುಖ್ಯವಾಗಿ 65 ವರ್ಷದ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದ ಒಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕು ಎಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಬೇಕು. ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಹಸಿರು ಪಟಾಕಿಯನ್ನು ಮಾತ್ರ ಹಚ್ಚಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ, ಮಾರ್ಗಸೂಚಿ ಉಲ್ಲಂಘಿಸಿದ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿ ಶಿಸ್ತಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಕ್ರೈಸ್ತ ಪ್ರಮುಖರಾದ ವಿರಾಜಪೇಟೆಯ ಮುತ್ತು ಅವರು ಸರ್ಕಾರದ ನಿಯಮ ಪಾಲಿಸಲಾಗುವುದು, ಜನದಟ್ಟನೆ ಸೇರದಂತೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ಕ್ರಿಸ್‍ಮಸ್ ಹಾಗೂ ಹೊಸ ವರ್ಷಕ್ಕೆ ಈಗಾಗಲೇ ಹೋಟೆಲ್, ರೆಸಾರ್ಟ್ ಮತ್ತು ಲಾಡ್ಜ್ ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದ್ದು, ಡಿಜೆ ಶಬ್ದವನ್ನು ಕಡಿಮೆ ಮಾಡಿ ಹೊಸ ವರ್ಷ ಆಚರಣೆ ಮಾಡಬಹುದೇ ಎಂದು ಕೋರಿದರು.
ಇದಕ್ಕೆ ಪೊಲೀಸ್ ಇನ್ಸೆಪೆಕ್ಟರ್ ಸಾಧ್ಯವಿಲ್ಲ, ಸರ್ಕಾರದ ನಿಯಮ ಪಾಲಿಸದಿದ್ದಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ದೂರುಗಳು ಬಂದಲ್ಲಿ ದಿಢೀರ್ ದಾಳಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷರಾದ ಅನಂತಶಯನ, ಮೊಂತಿ ಗಣೇಶ್, ಅಂಬೇಕಲ್ ನವೀನ್, ಧನಂಜಯ, ಅವರು ಹಲವು ವಿಷಯ ಪ್ರಸ್ತಾಪಿಸಿದರು.
ಡಿಎಚ್‍ಒ ಡಾ.ಕೆ.ಮೋಹನ್ ಅವರು ಕೋವಿಡ್-19 ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಬಳಸಿಯೋ ಮಾತನಾಡಬೇಕು ಎಂದು ಅವರು ಕೋರಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಧಿಕಾರಿ ಈಶ್ವರ್ ಕುಮಾರ್ ಖಂಡು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ, ಶ್ರೀಕಾಂತ್, ಡಿಡಿಪಿಐ ಪಿ.ಎಸ್‍ಡೋ, ಪೌರಾಯುಕ್ತರಾದ ಎಸ್,ವಿ.ರಾಮ್‍ದಾಸ್ ಇತರರು ಇದ್ದರು.

error: Content is protected !!