ಗೋಮಾಂಸ ಭಕ್ಷಣೆ ಹೇಳಿಕೆ : ನಾಪೋಕ್ಲು ಕೊಡವ ಸಮಾಜ ಖಂಡನೆ

December 19, 2020

ಮಡಿಕೇರಿ ಡಿ.19 : ಕೊಡವರು ಕೂಡ ಗೋಂಸ ಸೇವಿಸುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡವರ ಭಾವನೆಗಳಿಗೆ ದಕ್ಕೆ ತಂದಿದ್ದಾರೆ ಎಂದು ನಾಪೋಕ್ಲು ಕೊಡವ ಸಮಾಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಹಾಗೂ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಅವರುಗಳು, ಯಾರನ್ನೋ ಮೆಚ್ಚಿಸಲೆಂದು ಕೊಡವರ ಮನಸ್ಸಿಗೆ ಘಾಸಿ ಉಂಟು ಮಾಡುವ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು ಕೊಡವರ ಬೇಷರತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಬ್ರಿಟಿಷರ ಕಾಲದಿಂಂದಲೇ ಕೊಡಗಿನಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದ್ದು, ಕೊಡವರು ಎಂದಿಗೂ ಗೋಮಾಂಸ ಸೇವಿಸಿದವರಲ್ಲ. ಆದರೆ ಜವಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ದರ್ಪವನ್ನು ಪ್ರದರ್ಶಿಸಿದ್ದಾರೆ. ಪವಿತ್ರ ನದಿ ಕಾವೇರಿ ಹುಟ್ಟಿದ ನಾಡು ಕೊಡಗಿನಲ್ಲಿ ಗೋವುಗಳಿಗೆ ಪೂಜ್ಯ ಸ್ಥಾನವಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ಹಾಲನ್ನು ನೀಡುವ ಗೋವುಗಳನ್ನು ಕೊಡವರು ಮಾತೃ ಸ್ವರೂಪಿಯೆಂದು ಪೂಜಿಸುತ್ತಾರೆ. ಈ ಪುಣ್ಯ ಭೂಮಿಯಲ್ಲಿ ಗೋವುಗಳ ನೆತ್ತರು ಸುರಿಯಬಾರದೆಂದು ಬ್ರಿಟಿಷರ ಕಾಲದಿಂದಲೇ ಕೊಡಗಿನಲ್ಲಿ ಗೋವುಗಳ ಹತ್ಯೆಗೆ ಅವಕಾಶವಿಲ್ಲ. ಬ್ರಿಟಿಷರು ಕೂಡ ಕೊಡವರ ಭಾವನೆಗಳಿಗೆ ಸ್ಪಂದಿಸಿದ್ದಾರೆ, ಆದರೆ ಅನುಭವಿ ರಾಜಕಾರಣಿ ತಮ್ಮ ನಾಲಗೆಯನ್ನು ಹರಿಬಿಟ್ಟು ಸಣ್ಣವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಟಿಪ್ಪು ಜಯಂತಿಯ ಸಂದರ್ಭದಲ್ಲೂ ಕೊಡವರ ಭಾವನೆಗಳನ್ನು ಕೆಣಕಲಾಗಿದೆ. ಅಲ್ಲದೆ ವಿರೋಧದ ನಡುವೆಯೂ ಪೊಲೀಸ್ ಕಾವಲಿನಲ್ಲಿ ಹಟಬಿದ್ದು ಜಯಂತಿ ಆಚರಿಸಿದ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಮುಗ್ಗರಿಸಿದರೂ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಇದೀಗ ಗ್ರಾ.ಪಂ ಚುನಾವಣೆ ಸಂದರ್ಭದಲ್ಲೇ ಕೊಡವರನ್ನು ಕೆಣಕುವ ಕೆಲಸವನ್ನು ಅವರು ಮಾಡಿದ್ದು, ಕೊಡಗಿನ ಗ್ರಾಮೀಣ ಮತದಾರರು ಸರಿಯಾದ ಪಾಠವನ್ನೇ ಕಲಿಸಲಿದ್ದಾರೆ ಎಂದು ಮುನುಮುತ್ತಪ್ಪ ಹಾಗೂ ಅಜಿತ್ ನಾಣಯ್ಯ ತಿಳಿಸಿದ್ದಾರೆ.
ಕೊಡವರ ವಿರೋಧ ವ್ಯಕ್ತವಾಗುತ್ತಿರುವಾಗಲೇ ತಮ್ಮ ಮಾತಿಗೆ ತೇಪೆ ಹಾಕುವ ಕಾರ್ಯ ಮಾಡಿರುವ ಸಿದ್ದರಾಮಯ್ಯ ಅವರು, ನಾನು ಹಾಗೆ ಹೇಳಿಯೇ ಇಲ್ಲವೆಂದು ಸಮಜಾಯಿಷಿಕೆ ನೀಡಿದ್ದಾರೆ. ಅಲ್ಲದೆ ಕೊಡವರ ಬಗ್ಗೆ ಅಪಾರ ಗೌರವವಿದೆ ಎಂದು ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಈ ರೀತಿಯ ಮಾತುಗಳಿಗೆ ಕೊಡವರು ಮರುಳಾಗುವುದಿಲ್ಲ, ಬದಲಿಗೆ ಬೇಷರತ್ ಕ್ಷಮೆಯಾಚಿಸಿದರೆ ಮಾತ್ರ ಕೊಂಚ ಸಮಾಧಾನವಾಗಬಹುದು. ತಪ್ಪಿದಲ್ಲಿ ಸ್ವಾಭಿಮಾನಿ ಕೊಡವರು ಗ್ರಾ.ಪಂ ಚುನಾವಣೆ ಸಂದರ್ಭ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳಲಿದ್ದಾರೆ ಎಂದು ಅವರುಗಳು ಎಚ್ಚರಿಕೆ ನೀಡಿದ್ದಾರೆ.

error: Content is protected !!