ಚಳಿಗಾಲದಲ್ಲಿ ಆರೋಗ್ಯವಂತರಾಗಿರಲು ಪಾಲಿಸಬೇಕಾದ ಸೂತ್ರಗಳು

December 19, 2020

ನಮ್ಮ ಆರೋಗ್ಯದ ಮೇಲೆ, ನಾವು ಸೇವಿಸುವ ಆಹಾರದ ಜೊತೆಗೆ ವಾತಾವರಣ ಹಾಗೂ ಋತುವಿನ ಪ್ರಭಾವವೂ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲ ತುಂಬಾ ಒಳ್ಳೆಯ ಋತು. ಹೀಗಾಗಿ ಈ ಕಾಲವನ್ನು `ಆರೋಗ್ಯಕರ ಋತು’ ಎಂದು ಹೇಳಲಾಗುತ್ತದೆ.  ಆಯುರ್ವೇದ ಶಾಸ್ತ್ರದ ಅನುಸಾರವಾಗಿ ಸಂತುಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಬಲವರ್ಧಕ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಆರೋಗ್ಯವಂತರಾಗಿ ಇರಲು ಆಯುರ್ವೇದವು ಹಲವು ಸೂತ್ರಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದರಿಂದ ಈ ಕಾಲದಲ್ಲಿ ನಿರೋಗಿಗಳಾಗಿ ಇರಬಹುದು.

ಆಯುರ್ವೇದ ಹೇಳುವಂತೆ ಚಳಿಗಾಲದಲ್ಲಿ ನಾವು ಆರೋಗ್ಯವಂತರಾಗಿರಲು ಹೆಚ್ಚಿನ ಭಾಗ ಪ್ರಕೃತಿಯೇ ನಮಗೆ ಸಹಾಯಕವಾಗಿದೆ. ಈ ಕಾಲದಲ್ಲಿ ಸೂರ್ಯನು ದಕ್ಷಿಣಾಯನದಲ್ಲಿ ಇರುವುದರಿಂದ ಹಗಲುಗಳು ಕಿರಿದಾಗಿದ್ದು, ರಾತ್ರಿಗಳು ದೀರ್ಘವಾಗಿರುತ್ತವೆ. ಇದರಿಂದ ದೇಹದ ವಿಶ್ರಾಂತಿಗೆ ಸಾಕಷ್ಟು ಸಮಯ ದೊರೆಯುತ್ತದೆ. ಈ ಋತುವಿನಲ್ಲಿ ಜಠರಾಗ್ನಿಯೂ ಪ್ರಖರವಾಗಿ ಇರುವುದರಿಂದ ಸೇವಿಸಿದ ಆಹಾರ ಚೆನ್ನಾಗಿ ಪಚನವಾಗುತ್ತದೆ.

ನಮ್ಮ ದೇಶದಲ್ಲಿ ಚಳಿಗಾಲವು ಶರದ್ ಋತುವಿನಿಂದ ಆರಂಭವಾಗುತ್ತದೆ. ಆದ್ದರಿಂದ ಶರೀರವನ್ನು ಬೆಚ್ಚಗಿಡಲು ಉಣ್ಣೆ ಬಟ್ಟೆಗಳನ್ನು ಬಳಸುವುದರೊಂದಿಗೆ ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ.  ಈ ಋತುವಿನಲ್ಲಿ ಹಸಿವು ಜಾಸ್ತಿಯಾಗುವುದರಿಂದ ಕಾಲಕಾಲಕ್ಕೆ ಶರೀರಕ್ಕೆ ಆಹಾರ ಪೂರೈಸಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಹಸಿವನ್ನು ತಡೆಯಲು ಪ್ರಯತ್ನಿಸುವುದು ದೇಹಕ್ಕೆ ಹಾನಿ ಉಂಟು ಮಾಡಬಹುದು. ಹಾಗೆ ಮಾಡುವುದರಿಂದ ಜಠರಾಗ್ನಿಯು ರಕ್ತ, ಮಾಂಸ, ಧಾತು ಹಾಗೂ ರಸಗಳನ್ನು ದಹಿಸಿ ಶರೀರ ಕೃಷವಾಗಬಹುದು ಮತ್ತು ವಾಯುಪ್ರಕೋಪ ಹೆಚ್ಚಬಹುದು.

error: Content is protected !!