ಗೋಮಾಂಸ ವಿವಾದ : ಕೊಡಗು ಜೆಡಿಎಸ್ ಖಂಡನೆ

December 19, 2020

ಮಡಿಕೇರಿ ಡಿ.19 : ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಕಾಂಗ್ರೆಸ್ ಭಾವನೆಗಳಿಲ್ಲದ ಪಕ್ಷವಾಗಿದ್ದು, ಈ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೊಡವರು ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ತಮ್ಮ ನಿಲುವನ್ನು ಕೊಡಗಿನ ಜನರೆದುರು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಜವಾಬ್ದಾರಿಯುತ ವಿಪಕ್ಷ ನಾಯಕನ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಜನರ ಭಾವನೆಗಳಿಗೆ ಸ್ಪಂದಿಸುವ ಬದಲು ಕೆಣಕುವ ಕೆಲಸವನ್ನು ಮಾಡಿದ್ದಾರೆ. ಆಹಾರ ಪದ್ಧತಿಯ ಬಗ್ಗೆ ಅರ್ಥಹೀನ ಚರ್ಚೆಗಳ ಅಗತ್ಯವಿಲ್ಲ, ಆದರೂ ಜಾತಿ, ಜನಾಂಗಗಳನ್ನು ಬೊಟ್ಟು ಮಾಡಿ ಗೋಮಾಂಸ ಸೇವನೆಯ ಬಗ್ಗೆ ಹೇಳಿಕೆ ನೀಡಿರುವುದು ಖಂಡನೀಯ. ಯಾರು ಯಾವ ಆಹಾರವನ್ನು ಸೇವಿಸಬೇಕು ಎನ್ನುವುದು ಅವರವರ ವೈಯುಕ್ತಿಕ ವಿಚಾರವಾಗಿದೆ, ಅಲ್ಲದೆ ಆಹಾರ ಸೇವನೆಯೂ ಒಂದು ಹಕ್ಕಾಗಿದೆ. ಅದನ್ನು ಕಸಿದುಕೊಳ್ಳುವುದು ದೌರ್ಜನ್ಯಕ್ಕೆ ಸಮವಾದ ಕ್ರಮವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೋಮಾಂಸವನ್ನೇ ಸೇವಿಸದ ಕೊಡವರ ಬಗ್ಗೆ ಇಲ್ಲಸಲ್ಲದ ಹೇಳಿಕೆಯನ್ನು ನೀಡಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಅವರ ರಾಜಕಾರಣದ ಹಿರಿತನದ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಗಣೇಶ್ ಟೀಕಿಸಿದ್ದಾರೆ. ಈ ವಿಶ್ವದಲ್ಲಿ ಯಾರು, ಯಾವ ಆಹಾರವನ್ನಾದರೂ ಸೇವಿಸಲು ಸರ್ವ ಸ್ವತಂತ್ರರಾಗಿದ್ದಾರೆ. ಆಹಾರದ ವಿಚಾರವನ್ನು ನೆಪ ಮಾಡಿಕೊಂಡು ಒಂದು ಜನಾಂಗದ ತೇಜೋವಧೆ ಸರಿಯಲ್ಲ.
ಕೊಡವರ ಬಗ್ಗೆ ಭಾರೀ ಅಭಿಮಾನ ತೋರುತ್ತಾ ಜಿಲ್ಲಾ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ಕೊಡವ ಮುಖಂಡರು ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು ಮತ್ತು ಸಿದ್ದರಾಮಯ್ಯ ಅವರು ಕೊಡವರ ಕ್ಷಮೆಯಾಚಿಸಬೇಕೆಂದು ಗಣೇಶ್ ಒತ್ತಾಯಿಸಿದ್ದಾರೆ.

error: Content is protected !!