ಸಿದ್ದರಾಮಯ್ಯ ವಿರುದ್ಧ ಅಸಮಾಧಾನ : ಕ್ಷಮೆಯಾಚನೆಗೆ ವಿರಾಜಪೇಟೆ ಕೊಡವ ಸಮಾಜ ಒತ್ತಾಯ

ಮಡಿಕೇರಿ ಡಿ.19 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿರಾಜಪೇಟೆ ಕೊಡವ ಸಮಾಜ, ಗೋಮಾಂಸ ಸೇವನೆ ಹೇಳಿಕೆ ಕುರಿತು ತಕ್ಷಣ ಕೊಡವರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಭೂದೇವಿ, ಕಾವೇರಿ ತಾಯಿ ಹಾಗೂ ಗೋಮಾತೆಗೆ ಪೂಜನೀಯ ಸ್ಥಾನವನ್ನು ನೀಡಿರುವ ಕೊಡವರು ಗೋವಧೆಯನ್ನು ಮಾಡಿದವರಲ್ಲ ಮತ್ತು ಗೋಮಾಂಸವನ್ನು ಭಕ್ಷಿಸುವವರೂ ಅಲ್ಲ. ಆದರೂ ವಿನಾಕಾರಣ ಸ್ವಾಭಿಮಾನಿ ಕೊಡವರ ಭಾವನೆಗಳನ್ನು ಕೆಣಕುವ ಕೆಲಸಕ್ಕೆ ಸಿದ್ದರಾಮಯ್ಯ ಅವರು ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ತಾವು ನೀಡಿರುವ ಹೇಳಿಕೆಯನ್ನು ವಾಪಾಸ್ಸು ಪಡೆದು ಬಹಿರಂಗವಾಗಿ ಕೊಡವರ ಕ್ಷಮೆಯಾಚಿಸದಿದ್ದಲ್ಲಿ ಕೊಡವ ಸಮಾಜದಿಂದ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಯಾರೂ ಕೂಡ ಕೊಡವರ ಆಚಾರ, ವಿಚಾರ, ಸಂಸ್ಕøತಿಯನ್ನು ಅರಿಯದೆ ಅರ್ಥಹೀನ ಹೇಳಿಕೆಗಳನ್ನು ನೀಡಬಾರದು ಮತ್ತು ಕೊಡವರ ಭಾವನೆಗಳನ್ನು ಕೆಣಕಬಾರದು ಎಂದು ನಾಣಯ್ಯ ಮನವಿ ಮಾಡಿದ್ದಾರೆ.
