ಕೋವಿಡ್ ಶಂಕಿತರು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶ

December 19, 2020

ಮಡಿಕೇರಿ ಡಿ.19 : ಮೊದಲನೇ ಹಂತದಲ್ಲಿ ಡಿ. 22 ರಂದು ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಮತದಾನ ನಡೆಯಲಿದ್ದು, ಕೋವಿಡ್-19 ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಎಸ್‍ಒಪಿ ನೀಡಿದೆ. ಎಸ್‍ಒಪಿಯಂತೆ ಕೋವಿಡ್-19 ಸೋಂಕಿತರು ಹಾಗೂ ಮತದಾನದ ದಿನ ತಪಾಸಣೆಯಿಂದ ಕಂಡುಬಂದ ಕೋವಿಡ್ ಶಂಕಿತರು ಮತಗಟ್ಟೆಗಳಿಗೆ ತೆರಳಿ ಖುದ್ದು ಮತದಾನ ಮಾಡಲು ಇಚ್ಚಿಸಿದಲ್ಲಿ ಇವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹೋಂ ಐಸೋಲೇಷನ್ ನಲ್ಲಿ ಇರುವ ಕೋವಿಡ್-19 ಸೋಂಕಿತರು ಡಿಸೆಂಬರ್, 20 ರ ಸಂಜೆ 5 ಗಂಟೆಯೊಳಗೆ ಅವರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಸಂಬಂಧಪಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.

ಸಿಸಿಸಿ/ಕೋವಿಡ್ ಆಸ್ಪತ್ರೆಯಲ್ಲಿ ಇರುವ ಕೋವಿಡ್-19 ಸೋಂಕಿತರು ಆರೋಗ್ಯಾಧಿಕಾರಿಗಳಿಗೆ ಡಿಸೆಂಬರ್, 20 ರ ಸಂಜೆ 5 ಗಂಟೆಯೊಳಗೆ ಮಾಹಿತಿ ನೀಡುವುದು. ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖಾ ಸಿಬ್ಬಂದಿಗಳು ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರನ್ನು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಬಂಧಪಟ್ಟ ಮತಗಟ್ಟೆಗಳಿಗೆ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಕರೆತಂದು ಮತದಾನದ ನಂತರ ಅವರನ್ನು ಸ್ವಸ್ಥಾನಕ್ಕೆ ಮರಳಿ ಕರೆದುಕೊಂಡು ಹೋಗುವರು.
ಪ್ರತಿ ಮತದಾನ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಮತದಾನ ಕೊಠಡಿಗೆ, ಮಸ್ಟರಿಂಗ್, ಡಿ ಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ವ್ಯಕ್ತಿಗಳನ್ನು ಪ್ರವೇಶದ್ವಾರದಲ್ಲಿ ಕೋವಿಡ್-19 ಥರ್ಮಲ್ ಜ್ವರ ತಪಾಸಣೆ ಮಾಡಲಾಗುವುದು ಹಾಗೂ ಒಳಪ್ರವೇಶಿಸುವ ವ್ಯಕ್ತಿಗಳು ಮಾಸ್ಕ್ ಧರಿಸಿರುವುದನ್ನು ಹಾಗೂ ಪ್ರತಿಯೊಬ್ಬರೂ ಸ್ಯಾನಿಟೈಸರ್ ಬಳಸಿ ಕೈ ಶುಚಿಗೊಳಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.
ಕೋವಿಡ್-19 ಲಕ್ಷಣಗಳು ಕಂಡುಬಂದ ವ್ಯಕ್ತಿಗಳನ್ನು ಕೂಡಲೇ ಪ್ರತ್ಯೇಕಿಸಿ, ಹೆಚ್ಚಿನ ತಪಾಸಣೆಗೆ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡುವ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯಿಂದ ಮಾಡಲಾಗುವುದು. ಮತದಾನಕ್ಕೆ ನಿಗಧಿಪಡಿಸಿದ ಕೊಠಡಿಯನ್ನು ಮತ್ತು ಮಸ್ಟರಿಂಗ್, ಡಿಮಸ್ಟರಿಂಗ್, ತರಬೇತಿ ಕೇಂದ್ರ ಹಾಗೂ ಎಣಿಕೆ ಕೇಂದ್ರಗಳನ್ನು ಶೇ.1 ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಿ ಸಿದ್ಧಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!