ಸೋಮವಾರಪೇಟೆ ಪ.ಪಂ.ಗೆ ರೂ. 10 ಕೋಟಿ ಅನುದಾನ ಒದಗಿಸಲು ಸಚಿವರಿಗೆ ಮನವಿ

December 19, 2020

ಸೋಮವಾರಪೇಟೆ,ಡಿ.19: ಪಟ್ಟಣ ಪಂಚಾಯಿತಿಗೆ ರೂ. 10 ಕೋಟಿ ಅನುದಾನ ಒದಗಿಸುವಂತೆ ಪ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಉಸ್ತುವಾರಿ ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಪ.ಪಂ. ಅಧ್ಯಕ್ಷರನ್ನೊಳಗೊಂಡ ನಿಯೋಗ, 10 ಕೋಟಿ ವಿಶೇಷ ಅನುದಾನ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿತು.
ಪಟ್ಟಣ ಸಮೀಪದ ಚೌಡ್ಲು, ಹಾನಗಲ್ಲು ಹಾಗೂ ಬೇಳೂರು ಗ್ರಾಮ ಪಂಚಾಯಿತಿಗಳನ್ನು ಪ.ಪಂ. ವ್ಯಾಪ್ತಿಗೆ ಒಳಪಡಿಸಿ ಪಂಚಾಯಿತಿಯನ್ನು ವಿಸ್ತರಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಸಂಬಂಧಿಸಿದ ದಾಖಲೆಗಳನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಿದ್ದು, ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವರ ಗಮನ ಸೆಳೆದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಖಾಸಗಿಯವರಿಂದ ಭೂಮಿ ಖರೀದಿಸಲು ಸರ್ಕಾರದಿಂದ ಅನುದಾನ ಒದಗಿಸುವಂತೆ ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಪ.ಪಂ. ಸದಸ್ಯರ ಮನವಿಯನ್ನು ಸ್ವೀಕರಿಸಿದ ಸೋಮಣ್ಣ ಅವರು, ಆದಷ್ಟು ಶೀಘ್ರ ಈ ಬಗ್ಗೆ ಗಮನ ಹರಿಸುವ ಭರವಸೆ ನೀಡಿದರು.
ಈ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪ.ಪಂ. ಅಧ್ಯಕ್ಷೆ ನಳಿನಿ ಗಣೇಶ್, ಸದಸ್ಯರಾದ ಬಿ.ಆರ್. ಮಹೇಶ್, ಶುಭಾಕರ್, ಪಿ.ಕೆ. ಚಂದ್ರು, ಸೋಮೇಶ್, ಎಸ್, ಮಹೇಶ್, ಶರತ್‍ಚಂದ್ರ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!