ಸೋಮವಾರಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

19/12/2020

ಮಡಿಕೇರಿ ಡಿ. 19 : ಸೋಮವಾರಪೇಟೆ ಕೊಡವ ಸಮಾಜದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿಗಳು, ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹಾಗೂ ವಿವಿಧ ಜನಪ್ರತಿನಿಧಿಗಳ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಎಲ್ಲಾ ಜನರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯ 101 ಪಂಚಾಯಿತಿಗಳಲ್ಲಿ 90 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿಗರು ಅತ್ಯಧಿಕ ಸ್ಥಾನದಲ್ಲಿ ಗೆಲ್ಲಬೇಕು. ಆ ಮೂಲಕ ಮೋದಿ ಆಡಳಿತಕ್ಕೆ ಬೆಂಬಲ ಸೂಚಿಸಬೇಕು. ತಮ್ಮ ವಾರ್ಡ್‍ನ ಎಲ್ಲರೂ ಮತದಾನದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು. ಪಕ್ಷದ ಬೆಂಬಲ ಇದ್ದರೂ ಸಹ ವೈಯುಕ್ತಿಕ ಸಾಮಥ್ರ್ಯದ ಮೇಲೆ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಕಿವಿಮಾತು ಹೇಳಿದರು.
ಕಳೆದ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಇದೀಗ ನೆಲೆಗಾಗಿ ಪರದಾಡುತ್ತಿದೆ. ಬಿಜೆಪಿ ಜನಪರ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗುತ್ತಿದೆ ಎಂದರು ಅಭಿಪ್ರಾಯಿಸಿದರು.
ಜಿಲ್ಲೆಗೂ ಆತಂಕಕಾರಿಯಾಗಿರುವ ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬಂಧ, ಸಂಬಂಧಿಸಿದ ಅಧಿಕಾರಿಗಳಿಗೆ ವಾಸ್ತವಿಕತೆಯ ಬಗ್ಗೆ ಅರಿವು ಮೂಡಿಸಬೇಕು. ಕಾಡಾನೆಗಳ ಹಾವಳಿ ಬಗ್ಗೆ ಮನನ ಮಾಡಿಕೊಡಬೇಕು ಎಂದು ಸೋಮಣ್ಣ ಹೇಳಿದರು.
ಸಭೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಪಶ್ಚಿಮಘಟ್ಟ ಸಂರಕ್ಷಣಾ ನಿಗಮದ ಅಧ್ಯಕ್ಷ ರವಿಕುಶಾಲಪ್ಪ, ಮಾಜೀ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಾಜೀ ಅಧ್ಯಕ್ಷ ಭಾರತೀಶ್, ತಾಲೂಕು ಅಧ್ಯಕ್ಷ ಮನುರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾದಪ್ಪ, ಎಸ್.ಸಿ. ಮೋರ್ಚಾ ಅಧ್ಯಕ್ಷ ಪ್ರತಾಪ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.