ಮಾಜಿ ಸಿಎಂ ಸಿದ್ದರಾಮಯ್ಯ ಕೊಡವರ ಕ್ಷಮೆಯಾಚಿಸಲಿ : ಕೊಡಗು ಬಿಜೆಪಿ ಒತ್ತಾಯ

19/12/2020

ಮಡಿಕೇರಿ ಡಿ.19 : ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ತಮ್ಮ ಬಾಯಿ ಚಪಲ ತೀರಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಕೊಡವ ಜನಾಂಗವನ್ನು ವಿನಾಕಾರಣ ತೋಜೋವಧೆ ಮಾಡಿರುವ ಸಿದ್ದರಾಮಯ್ಯ ಅವರ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಅನೇಕ ವರ್ಷಗಳ ರಾಜಕೀಯ ಹಿರಿತನವನ್ನು ಹೊಂದಿರುವ ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ರಾಜ್ಯವನ್ನಾಳಿದ್ದಾರೆ. ಅಲ್ಲದೆ ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಇದರ ಅರಿವಿಲ್ಲದೆ ಕೊಡವರ ಸಂಸ್ಕøತಿಯನ್ನು ಅರಿಯದೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪವಿತ್ರ ಕಾವೇರಿ ನದಿ ಹುಟ್ಟುವ ಭೂಮಿಯಲ್ಲಿ ಗೋವುಗಳನ್ನು ಮಾತೆ ಎಂದು ಪೂಜಿಸುತ್ತಾ, ಗೋಹತ್ಯೆ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿರುವ ಕೊಡವರ ಭಾವನೆಗಳೊಂದಿಗೆ ಸಿದ್ದರಾಮಯ್ಯ ಅವರು ಚೆಲ್ಲಾಟವಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇವರ ಈ ವರ್ತನೆ ಇದೇ ಮೊದಲಲ್ಲ, ತಾವು ಮುಖ್ಯಮಂತ್ರಿಯಾಗಿದ್ದಾಗ ಕೊಡಗಿನ ಜನರ ವಿರೋಧದ ನಡುವೆಯೂ ಟಿಪ್ಪು ಜಯಂತಿಯನ್ನು ಬಲವಂತವಾಗಿ ಹೇರಿ ರಾಜಕೀಯ ಬೇಳೆ ಬೇಯಿಸಲು ಪ್ರಯತ್ನಿಸಿದ್ದರು. ಅಲ್ಲದೆ ಮಾಂಸ ಸೇವಿಸಿ ದೇವಾಲಯ ಪ್ರವೇಶಿಸಿದ ಬಗ್ಗೆಯೂ ಸಮರ್ಥಿಸಿಕೊಂಡಿದ್ದರು. ರಾಜ್ಯದ ಜನತೆ ಚುನಾವಣೆಯಲ್ಲಿ ಸರಿಯಾದ ಪಾಠವನ್ನೇ ಕಲಿಸಿದ್ದರೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದ ಸಿದ್ದರಾಮಯ್ಯ ಅವರು ಇದೀಗ ಮತ್ತೆ ಕೊಡವರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಕೊಡಗಿನ ಬಗ್ಗೆ ಅವರಿಗಿರುವ ತಾತ್ಸಾರ ಮನೋಭಾವವೇ ಇದಕ್ಕೆಲ್ಲ ಕಾರಣವೆಂದು ಟೀಕಿಸಿದ್ದಾರೆ.
ಕೊಡಗಿನ ಕಾಂಗ್ರೆಸ್ ನಾಯಕರಿಗೆ ಕೊಡವರು ಮತ್ತು ಕೊಡಗಿನ ಬಗ್ಗೆ ನೈಜ ಅಭಿಮಾನವಿದ್ದರೆ ಕ್ಷಮೆಯಾಚನೆಗಾಗಿ ತಮ್ಮ ನಾಯಕ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಿ ಎಂದು ಅವರು ಒತ್ತಾಯಿಸಿದ್ದಾರೆ.
ತಮ್ಮ ತಪ್ಪನ್ನು ತಿದ್ದಿಕೊಂಡು ಕೊಡವರ ಕ್ಷಮೆಯಾಚಿಸದಿದ್ದಲ್ಲಿ ಬಿಜೆಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.