ಆರ್ಜಿ ತರ್ಮೆಕಾಡು ಪೈಸಾರಿ ಸರ್ವೆಗೆ ಸಿಪಿಐಎಂ ಒತ್ತಾಯ

19/12/2020

ಮಡಿಕೇರಿ ಡಿ.19 : ಆರ್ಜಿ ಗ್ರಾಮದ ತರ್ಮೆಕಾಡು ಪೈಸಾರಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿರುವ ಆದೇಶವನ್ನು ಜಿಲ್ಲಾಡಳಿತ ಸಾರ್ವಜನಿಕವಾಗಿ ಪ್ರಕಟಿಸಿ ಅರ್ಥೈಸದ ಕಾರಣ ಗೊಂದಲಗಳು ಸೃಷ್ಟಿಯಾಗಿದೆ. ಅಲ್ಲದೆ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ಕೆಲವರು ಬಡವರ ಮೇಲೆ ಗೂಂಡಾಗಿರಿ ಮಾಡಿದ್ದಾರೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂ ಕಾರ್ಯದರ್ಶಿ ಡಾ.ಈ.ರಾ.ದುರ್ಗಾಪ್ರಸಾದ್ ಜಿಲ್ಲಾಧಿಕಾರಿಗಳು ತಕ್ಷಣ ತೆರ್ಮೆಕಾಡು ಪೈಸಾರಿ ಸರ್ವೆಗೆ ಕ್ರಮ ಕೈಗೊಂಡು ಜಾಗದ ವಿಸ್ತೀರ್ಣ ಗುರುತು ಮಾಡಿ ಎಲ್ಲಾ ಒತ್ತುವರಿದಾರರ ಹೆಸರು ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದರು.
ಆರ್ಜಿ ಗ್ರಾಮದಲ್ಲಿರುವ ಜಾನುವಾರುಗಳ ಗಣತಿ ಕಾರ್ಯ ನಡೆಸಬೇಕು, ಗಣತಿ ಮಾಡುವ ಸಮಿತಿಯಲ್ಲಿ ಬುಡಕಟ್ಟು ಹಾಗೂ ದಲಿತ ನಿವಾಸಿಗಳ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕು. ನಂತರ ಜಾನುವಾರುಗಳ ಲೆಕ್ಕಕ್ಕೆ ಅನುಗುಣವಾಗಿ ಜಾಗದ ವ್ಯಾಪ್ತಿಯನ್ನು ನಿಗಧಿ ಮಾಡಬೇಕು ಎಂದರು.
ತರ್ಮೆಕಾಡು ಪೈಸಾರಿಯನ್ನು ಗೋಮಾಳವೆಂದು ಘೋಷಿಸಬೇಕೆಂಬ ವಿನಂತಿಯನ್ನು ನ್ಯಾಯಾಲಯ ಪುರಸ್ಕರಿಸಿಲ್ಲವಾದ್ದರಿಂದ ಅದು ಪೈಸಾರಿ ಜಾಗವೇ ಆಗಿದೆ. ಅಲ್ಲಿ ವಾಸವಿರುವ ಬಡ ಕುಟುಂಬಗಳಗಳಿಗೆ ಹಕ್ಕುಪತ್ರ ನೀಡಬೇಕು, ಪೈಸಾರಿ ಜಾಗಗಳು ಸರಕಾರದ ಜಾಗವಾಗಿದ್ದು, ಭೂ ರಹಿತರಿಗೆ ಹಂಚುವಂತಾಗಬೇಕು, ಗೂಂಡಾಗಳಂತೆ ವರ್ತಿಸಿದ ಕಿಡಿಗೇಡಿಗಳ ವಿರುದ್ಧ ಮತ್ತು ಬಡವರ ಗುಡಿಸಲುಗಳಿಗೆ ಹಾನಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಕಾನೂನು ಬಾಹಿರವಾಗಿ ಬೇಲಿ ಹಾಕಿದವರ ಬೇಲಿಗಳನ್ನು ಕಿತ್ತೆಸೆಯಬೇಕು, ರಾಜಕೀಯ ಪ್ರಭಾವಿಗಳು ಮತ್ತು ಶ್ರೀಮಂತರು ಕಬಳಿಸಿದ ಪೈಸಾರಿ ಭೂಮಿಯನ್ನು ವಶಪಡಿಸಿಕೊಂಡು ಭೂ ರಹಿತರಿಗೆ ಹಂಚಬೇಕು ಎಂದು ದುರ್ಗಾಪ್ರಸಾದ್ ಆಗ್ರಹಿಸಿದರು.
ಭೂರಹಿತ ಬಡವರು ಹಾಗೂ ಕಾರ್ಮಿಕರು ಸರ್ಕಾರಿ ನಿವೇಶನಕ್ಕಾಗಿ ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ಸಿಪಿಐಎಂನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿ ಎ.ಸಿ.ಸಾಬು ಉಪಸ್ಥಿತರಿದ್ದರು.