ಜೀವಿಜಯ ಅವರ ವಿರುದ್ಧದ ಟೀಕೆ ಖಂಡನೀಯ : ಜಿಲ್ಲಾ ಕಾಂಗ್ರೆಸ್ ಅಸಮಾಧಾನ

December 19, 2020

ಮಡಿಕೇರಿ ಡಿ.19 : ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಪಕ್ಷದ ಬಲ ದುಪ್ಪಟ್ಟಾಗಿದೆ. ಇದನ್ನು ಸಹಿಸದ ಜೆಡಿಎಸ್ ಮುಖಂಡರು ಜೀವಿಜಯ ಅವರ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ರಾಜಕಾರಣಿ ಮುಂದಿನ ಪೀಳಿಗೆಯ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ಮಾಡುವುದು ಸಾಮಾನ್ಯ. ಇದನ್ನೇ ನೆಪಮಾಡಿಕೊಂಡು ಹತಾಶ ಮನೋಭಾವದಿಂದ ಜೆಡಿಎಸ್ ಪ್ರಮುಖರು ಜೀವಿಜಯ ಅವರ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲವೆಂದರು.
ಗ್ರಾ.ಪಂ ಚುನಾವಣೆಯಲ್ಲಿ ಜನಪರ ಕಾಳಜಿ ಇರುವ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿದ ಸುರೇಶ್, ಕೊಡಗಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಶಾಸಕರುಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿಗೆ, ವನ್ಯಜೀವಿಗಳ ದಾಳಿ ನಿತ್ಯ ನಡೆಯುತ್ತಲೇ ಇದೆ. ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಸೂಕ್ತ ಪರಿಹಾರವೇ ದೊರೆತ್ತಿಲ್ಲ. ರೈತರು ಹಾಗೂ ಬೆಳೆಗಾರರ ಬೇಡಿಕೆಗಳು ಈಡೇರುತ್ತಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ, ಆದರೆ ಸರ್ಕಾರ ಮಾತ್ರ ಯಾವುದೇ ಸ್ಪಂದನೆ ನೀಡುತ್ತಿಲ್ಲವೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಮಡಿಕೇರಿ ಸಂಘಟನಾ ಕಾರ್ಯದರ್ಶಿ ಮುನೀರ್ ಮಚಾರ್, ಪ್ರಮುಖರಾದ ಕಲೀಲ್ ಬಾಷ, ಎನ್.ಎಂ.ಸಾಜಿರ್ ಹಾಗೂ ಅಕೀಲ್ ಖಾನ್ ಉಪಸ್ಥಿತರಿದ್ದರು.

error: Content is protected !!