ಜಿಂಕೆ, ಕಾಡುಕುರಿ ಕೊಂಬುಗಳ ಮಾರಾಟ ಯತ್ನ : ಸೋಮವಾರಪೇಟೆಯಲ್ಲಿ ಓರ್ವನ ಬಂಧನ

19/12/2020

ಮಡಿಕೇರಿ ಡಿ.19 : ಜಿಂಕೆ ಹಾಗೂ ಕಾಡು ಕುರಿಯ ಕೊಂಬುಗಳನ್ನು(ಕೋಡು) ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಸೋಮವಾರಪೇಟೆ ತಾಲೂಕು ಅರಣ್ಯ ಸಂಚಾರಿ ದಳದ ಸಿಐಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದ ನಿವಾಸಿ ಹೆಚ್.ಎಂ. ಪ್ರಮೋದ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಮತ್ತೋರ್ವ ಆರೋಪಿ ಶನಿವಾರಸಂತೆಯ ನಿಡ್ತಕೊಪ್ಪಲು ನಿವಾಸಿ ಎನ್.ಎನ್.ಯತೀಶ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಯಿಂದ ಒಂದು ಕಾಡು ಕುರಿಯ ಕೊಂಬು ಹಾಗೂ 2 ಜಿಂಕೆ ಕೊಂಬುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದರೆ, ತಲೆ ಮರೆಸಿಕೊಂಡ ಆರೋಪಿಯ ಪತ್ತೆಗಾಗಿ ಬಲೆ ಬೀಸಲಾಗಿದೆ.
ಡಿ.18ರ ಬೆಳಗೆ 7.30 ಗಂಟೆಗೆ ಸೋಮವಾರಪೇಟೆ ತಾಲೂಕು ಕಿಬ್ಬೆಟ್ಟದ ಪ್ರಯಾಣಿಕರ ಬಸ್ ತಂಗುದಾಣದ ಬಳಿ ಇಬ್ಬರು ವ್ಯಕ್ತಿಗಳು ಕಾಡು ಕುರಿಯ ಕೋಡನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಸೋಮವಾರಪೇಟೆ ಅರಣ್ಯ ಸಂಚಾರಿ ದಳದ ಸಿಐಡಿ ಸಿಬ್ಬಂದಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಅತ್ತ ಕಡೆ ತೆರಳಿದ ಸಂದರ್ಭ ಇಬ್ಬರು ವ್ಯಕ್ತಿಗಳು ಬೈಕ್‍ನಲ್ಲಿ(ಕೆಎ.13-ಇಸಿ.920) ಸಂಶಯಾಸ್ಪದ ರೀತಿಯಲ್ಲಿ ನಿಂತಿರುವುದು ಕಂಡು ಬಂದಿತ್ತು. ತಕ್ಷಣವೇ ಅರಣ್ಯ ಸಂಚಾರಿ ದಳದ ಪೊಲೀಸ್ ಸಿಬ್ಬಂದಿಗಳು ಅವರನ್ನು ಸುತ್ತುವರಿದು ಸೆರೆ ಹಿಡಿಯಲು ಯತ್ನಿಸಿದಾಗ ಓರ್ವ ವ್ಯಕ್ತಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮತ್ತೊಬ್ಬನನ್ನು ಹಿಡಿದು ಅವನ ಬಳಿಯಿದ್ದ ಬ್ಯಾಗ್ ಅನ್ನು ಪರಿಶೀಲಿಸಿದ ಸಂದರ್ಭ ಒಂದು ಕಾಡು ಕುರಿಯ ಮುಖ ಭಾಗ ಹೊಂದಿರುವ ಕೋಡು ಮತ್ತು 2 ಜಿಂಕೆ ಕೊಂಬುಗಳು ಪತ್ತೆಯಾಗಿದೆ. ಕೋಡುಗಳನ್ನು ಇಟ್ಟುಕೊಳ್ಳುವ ಮತ್ತು ಅದನ್ನು ಮಾರಾಟ ಮಾಡುವ ಬಗ್ಗೆ ಸರಕಾರದ ಪರವಾನಗಿ ಪತ್ರ ಇರುವ ಬಗ್ಗೆ ವಿಚಾರಿಸಿದಾಗ ಆರೋಪಿ ಪ್ರಮೋದ್ ಬಳಿ ಯಾವುದೇ ದಾಖಲೆಗಳು ಇಲ್ಲದಿರುವುದು ತಿಳಿದು ಬಂದಿದೆ. ಬಳಿಕ ಪ್ರಮೋದ್ ಮತ್ತು ಆತನ ಬಳಿಯಿದ್ದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.