ಕೊಡವರ ಮೇಲಿನ ದ್ವೇಷಕ್ಕೆ ಕಾರಣ ತಿಳಿಸಿ : ರವಿಕುಶಾಲಪ್ಪ ಒತ್ತಾಯ

20/12/2020

ಮಡಿಕೇರಿ ಡಿ.20 : ನಿರಂತರವಾಗಿ ಕೊಡವರ ಭಾವನೆಗಳಿಗೆ ದಕ್ಕೆ ತರುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡವರ ಮೇಲಿನ ದ್ವೇಷಕ್ಕೆ ಕಾರಣವನ್ನು ಬಹಿರಂಗ ಪಡಿಸಬೇಕು ಮತ್ತು ಕೊಡವರು ಯಾವಾಗ ಗೋಮಾಂಸ ಸೇವಿಸಿದ್ದಾರೆ ಎನ್ನುವುದನ್ನು ಸಾಬೀತು ಪಡಿಸಬೇಕೆಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಕೊಡವ ಜನಾಂಗವನ್ನು ಅವಹೇಳನ ಮಾಡಿರುವ ಸಿದ್ದರಾಮಯ್ಯ ಅವರು ಕೊಡಗಿಗೆ ಆಗಮಿಸುವ ಸಂದರ್ಭ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಾವಿರಾರು ಕೊಡವರನ್ನು ಹತ್ಯೆಗೈದ ಟಿಪ್ಪುವಿನ ಜಯಂತಿ ಆಚರಣೆ ಬೇಡವೆಂದು ಕೊಡವರು ಹಾಗೂ ಕೊಡಗಿನ ಜನ ಮನವಿ ಮಾಡಿಕೊಂಡರೂ ಜಯಂತಿಯನ್ನು ಬಲವಂತವಾಗಿ ಆಚರಿಸಲಾಯಿತು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತಿನಂತೆ ಟಿಪ್ಪು ಜಯಂತಿಯನ್ನು ರದ್ದು ಮಾಡಲಾಗಿದೆ ಮತ್ತು ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಬಹುಸಂಖ್ಯಾತ ಹಿಂದೂಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬೆನ್ನಲ್ಲೇ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವ ಭರದಲ್ಲಿ ಕೊಡವರನ್ನೇ ಗುರಿ ಮಾಡಿ ಗೋಮಾಂಸದ ಬಗ್ಗೆ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿರುವ ರವಿಕುಶಾಲಪ್ಪ, ಎಲುಬಿಲ್ಲದ ನಾಲಿಗೆಯಲ್ಲಿ ಏನು ಬೇಕಾದರೂ ಮಾತನಾಡಿದರೆ ಅದನ್ನು ಸಹಿಸಿಕೊಂಡು ಸುಮ್ಮನಿರಲು ಕೊಡವರು ಹೇಡಿಗಳಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತರ ಮೇಲೆ ಅತಿ ಪ್ರೀತಿ ತೋರುವ ಸಿದ್ದರಾಮಯ್ಯ ಅವರಿಗೆ ಕೊಡವರ ಮೇಲೆಕೆ ದ್ವೇಷ ಎಂದು ಪ್ರಶ್ನಿಸಿರುವ ಅವರು, ಗೋವುಗಳನ್ನು ಪೂಜಿಸುವ ಕೊಡವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯವೆಂದು ತಿಳಿಸಿದ್ದಾರೆ. ಹುಟ್ಟು ಹೋರಾಟಗಾರರಾಗಿರುವ ಕೊಡವರು ಗೋಹತ್ಯೆ ನಿಷೇಧಕ್ಕೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಬ್ರಿಟಿಷರ ಕಾಲದಿಂದಲೇ ಕೊಡಗಿನಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ. ಒಬ್ಬ ಹಿರಿಯ ರಾಜಕಾರಣಿಯಾಗಿ ವೀರ ಕೊಡಗಿನ ಚರಿತ್ರೆ ಬಗ್ಗೆ ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡಿರುವುದನ್ನು ಗಮನಿಸಿದರೆ ಇದು ಸಿದ್ದರಾಮಯ್ಯ ಅವರ ರಾಜಕೀಯ ಅವಸಾನದ ಕಾಲವೆಂದು ಗೋಚರಿಸುತ್ತಿದೆ. ಅಭಿವೃದ್ಧಿ ಪರ ಚಿಂತನೆಯೊಂದಿಗೆ ಆರೋಗ್ಯಕರ ರಾಜಕಾರಣವನ್ನು ಮಾಡದೆ ಜಾತಿ, ಜನಾಂಗಗಳ ಭಾವನೆಗಳಿಗೆ ದಕ್ಕೆ ತಂದು ಸಮಾಜವನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಡಗಿನ ಕಾಂಗ್ರೆಸ್ಸಿಗರು ಕೂಡ ತಮ್ಮ ನಾಯಕನ ಹೇಳಿಕೆ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಸಿದ್ದರಾಮಯ್ಯ ಅವರು ಬಹಿರಂಗವಾಗಿ ಕೊಡವರ ಕ್ಷಮೆಯಾಚಿಸಬೇಕು. ತಪ್ಪಿದಲ್ಲಿ ಕಾನೂನು ಹೋರಾಟಕ್ಕೂ ಸಿದ್ಧ ಎಂದು ರವಿಕುಶಾಲಪ್ಪ ತಿಳಿಸಿದ್ದಾರೆ. ಪಕ್ಷಾತೀತವಾಗಿ ಡಿ.21 ರಂದು ಕೊಡವರು ಮಡಿಕೇರಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ತಮ್ಮ ಬೆಂಬಲವಿದೆ ಎಂದು ಘೋಷಿಸಿದ್ದಾರೆ.