ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮರಗಳ ಸಂಗ್ರಹ : ಹಾನಗಲ್ಲು ಗ್ರಾಮದಲ್ಲಿ ಪ್ರಕರಣ

20/12/2020

ಸೋಮವಾರಪೇಟೆ ಡಿ.20 : ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಮರಗಳನ್ನು ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹಾನಗಲ್ಲು ಗ್ರಾಮದ ವಿಜಯ ಅವರ ಪುತ್ರ ಹೆಚ್.ವಿ. ಮಿಥುನ್ ಎಂಬವರ ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ಹೊನ್ನೆ, ನಂದಿ, ಬೀಟೆ, ತೇಗ, ಅರಶಿಣ ತೇಗದ ಮರಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರ ನೇತೃತ್ವದಲ್ಲಿ ನಡೆದ ಧಾಳಿ ಸಂದರ್ಭ, ಮನೆಯೊಳಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು 176 ಸಿಎಫ್‍ಟಿ ಮರಗಳನ್ನು ವಶಕ್ಕೆ ಪಡೆಯಲಾಗಿದೆ.
ಮನೆಯೊಳಗೆ ಸಂಗ್ರಹಿಸಿಟ್ಟಿದ್ದ 24 ಸಿಎಫ್‍ಟಿ ಬೀಟೆ, 71 ಸಿಎಫ್‍ಟಿ ನಂದಿ, 71 ಸಿಎಫ್‍ಟಿ ಹೊನ್ನೆ, 7 ಸಿಎಫ್‍ಟಿ ತೇಗ, 3 ಸಿಎಫ್‍ಟಿ ಅರಶಿಣ ತೇಗದ ಸೈಜ್ ಸೇರಿದಂತೆ ಒಟ್ಟು 176 ಸಿಎಫ್‍ಟಿ ಮರಗಳನ್ನು ವಶಕ್ಕೆ ಪಡೆದು 2 ಪಿಕ್‍ಅಪ್ ಹಾಗೂ 2 ಟ್ರ್ಯಾಕ್ಟರ್‍ನಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಸಾಗಿಸಲಾಗಿದೆ.
ದೇವಾಲಯ ನಿರ್ಮಾಣದ ಕೆಲಸಕ್ಕೆ ಮರಗಳನ್ನು ಸಂಗ್ರಹಿಸಿಡಲಾಗಿದೆ. ಇವುಗಳಿಗೆ ಪರ್ಮಿಟ್ ಇದೆ ಎಂದು ಮಿಥುನ್ ಮಾಹಿತಿ ನೀಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಎಫ್ ಕೊಚ್ಚೇರ ನೆಹರು, ಸೋಮವಾರಪೇಟೆ ಆರ್‍ಎಫ್‍ಓ ಎ. ಸುಮಂತ್, ಶನಿವಾರಸಂತೆಯ ಆರ್‍ಎಫ್‍ಓ ಪ್ರಫುಲ್ ಶೆಟ್ಟಿ, ಕುಶಾಲನಗರ ಆರ್‍ಎಫ್‍ಓ ಅನನ್ಯಕುಮಾರ್, ಬೇಳೂರು ಶಾಖೆಯ ಡಿಆರ್‍ಎಫ್‍ಓ ನಾರಾಯಣ ಮೂಲ್ಯ, ಡಿಆರ್‍ಎಫ್‍ಓ ರಾಕೇಶ್,ಅರಣ್ಯ ರಕ್ಷಕ ಮೋಹನ್‍ಕುಮಾರ್, ಸಿಬ್ಬಂದಿಗಳಾದ ವಿಜಯ, ಸುಂದರ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.