ಗೋಮಾಂಸ ವಿವಾದ : ಕುಶಾಲನಗರ ಕೊಡವ ಸಮಾಜದಿಂದ ಪ್ರತಿಭಟನೆ

December 20, 2020

ಕುಶಾಲನಗರ ಡಿ.20 : ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯ ವಿರುದ್ಧ ಕುಶಾಲನಗರ ಕೊಡವ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಮಾಜದ ಪ್ರಮುಖರು ಪ್ರತಿಭಟನೆ ನಡೆಸಿದರು. ಕುಶಾಲನಗರ ಗಣಪತಿ ದೇವಾಲಯ ಬಳಿ ಸೇರಿದ ಪ್ರಮುಖರು ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದರು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೆಪಂಡ ಬೋಸ್ ಮೊಣ್ಣಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿ ತಾವು ಗೋವುಗಳನ್ನು ಪೂಜಿಸುವ ಸಮುದಾಯವೇ ಹೊರತು ಗೋಮಾಂಸ ಭಕ್ಷಕರಲ್ಲ ಎಂದರು. ಈ ಸಂದರ್ಭ ಮಾತನಾಡಿದ ಬೋಸ್ ಮೊಣ್ಣಪ್ಪ ಜವಾಬ್ದಾರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಕೊಡವರಿಗೆ ಕಳಂಕ ತಂದಿದೆ ಎಂದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಫಿ ಬೆಳೆಗಾರ, ಉದ್ಯಮಿ ಚೇಂದಂಡ ಜೆಮ್ಸಿ ಪೊನ್ನಪ್ಪ ಅವರು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ ಇಂತಹ ಬಾಲಿಶ ಹೇಳಿಕೆ ನೀಡುವುದು ಮಾಜಿ ಮುಖ್ಯಮಂತ್ರಿಗಳಿಗೆ ತರವಲ್ಲ ಎಂದರು. ಪ್ರತಿಭಟನೆಯಲ್ಲಿ ಸಮಾಜದ ಉಪಾಧ್ಯಕ್ಷ ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಕಾರ್ಯದರ್ಶಿ ಐಲಪಂಡ ಸಂಜು, ಪುಲಿಯಂಡ ಚಂಗಪ್ಪ, ಮಾದಪಂಡ ಸತೀಶ್ ಹಾಗೂ ಸಮಾಜದ ನಿರ್ದೇಶಕರು ಇದ್ದರು.

error: Content is protected !!