ವಿವಾದಾತ್ಮಕ ಹೇಳಿಕೆ : ಮಡಿಕೇರಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ

December 21, 2020

ಮಡಿಕೇರಿ ಡಿ.20 : ಕೊಡವ ಜನಾಂಗದವರು ಗೋಮಾಂಸ ಸೇವಿಸುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಿವಿಧ ಕೊಡವ ಸಮಾಜದ ಸಂಘಟನೆಗಳು ಹಾಗೂ ಬಿಜೆಪಿ ಪ್ರಮುಖರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡವರ ವಿರುದ್ಧ ನಿರಂತರ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು. ವೀರಸೇನಾನಿಗಳ ನಾಡು ಕೊಡಗಿನ ಬಗ್ಗೆ ಅರಿಯದೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಟಿಪ್ಪು ಜಯಂತಿ ಬೇಡ ಎಂಬ ಕೂಗಿನ ನಡುವೆಯೇ ಬಲವಂತವಾಗಿ ಜಯಂತಿ ಆಚರಿಸಲಾಯಿತು. ಕೇವಲ ಒಂದು ಸಮುದಾಯವನ್ನು ಮಾತ್ರ ಪ್ರೀತಿಯಿಂದ ಕಾಣುವ ಇಂತಹವರ ನಡುವೆ ಹಿಂದೂತ್ವದ ರಾಜಕಾರಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷದಲ್ಲಿರುವ ಕೊಡವ ನಾಯಕರು ತಮ್ಮ ನಾಯಕನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಹೇಳಿಕೆ ತಪ್ಪು ಎಂದಾದಲ್ಲಿ ದಿಕ್ಕಾರ ಕೂಗಬೇಕು ಎಂದ ರವಿಕುಶಾಲಪ್ಪ, ಸಿದ್ದರಾಮಯ್ಯ ಅವರು ಬಹಿರಂಗವಾಗಿ ಕ್ಷಮೆಯಾಚಿಸದಿದ್ದಲ್ಲಿ ಕೊಡಗಿಗೆ ಆಗಮಿಸುವ ಸಂದರ್ಭ ಕೊಪ್ಪ ಗೇಟ್ ಬಳಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಬ್ರಿಟಿಷರ ಕಾಲದಿಂದಲೇ ಕೊಡಗಿನಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದ್ದು, ಕೊಡವರು ಎಂದಿಗೂ ಗೋಮಾಂಸ ಸೇವಿಸಿದವರಲ್ಲ. ಆದರೆ ಸಿದ್ದರಾಮಯ್ಯ ಅವರು ಕೊಡವರು ಗೋಮಾಂಸ ಸೇವಿಸುತ್ತಾರೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಬೋಸ್ ದೇವಯ್ಯ ಮಾತನಾಡಿ, ಕೊಡಗಿನ ಜನ ಗೋವುಗಳನ್ನು ಪೂಜೆ ಮಾಡುವವರು. ಹಿಂದಿನಿಂದಲೂ ಕೊಡಗಿನಲ್ಲಿ ಗೋಹತ್ಯೆ ಮಾಡಲು ಅವಕಾಶ ಇಲ್ಲ. ಹೀಗಿರುವಾಗ ಕೊಡಗಿನ ಆಚಾರ, ವಿಚಾರಗಳ ಬಗ್ಗೆ ತಿಳಿಯದೆ ಕೊಡವರು ಗೋಮಾಂಸವನ್ನು ಸೇವಿಸುತ್ತಾರೆ ಎಂದು ಹೇಳಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಕೊಡಗಿಗೆ ಆಗಮಿಸಿದ ಸಂದರ್ಭ ಅವರನ್ನು ಕೊಡವರು ಗೌರವಿಸಿ ಸನ್ಮಾನಿಸಿದ್ದರು. ಆದರೆ ಇದೀಗ ಕೊಡವ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದು, ಬಾಳುಗೋಡುವಿನ ಫೆಡರೇಷನ್ ಆಫ್ ಕೊಡವ ಸಮಾಜದಲ್ಲಿ ಹಾಕಿರುವ ಅವರ ಭಾವಚಿತ್ರವನ್ನು ತಕ್ಷಣ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೊಡವರನ್ನು ನಿರಂತರವಾಗಿ ಅವಹೇಳನ ಮಾಡಲಾಗುತ್ತಿದ್ದು, ಇದೀಗ ಬಹಿರಂಗವಾಗಿ ಕೊಡವರ ಸ್ವಾಭಿಮಾನವನ್ನು ಕೆಣಕಲಾಗುತ್ತಿದೆ. ಆದ್ದರಿಂದ ಎಲ್ಲಾ ಕೊಡವರು ಒಗ್ಗೂಡಿ ಈ ರೀತಿಯ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕೆಂದರು.
ಜಿ.ಪಂ. ಮಾಜಿ ಸದಸ್ಯೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ಸಿದ್ದರಾಮಯ್ಯ ಅವರ ಹೇಳಿಕೆ ಖಂಡನೀಯವೆಂಂದರು. ಕೊಡವರನ್ನು ಬಹಿರಂಗವಾಗಿ ಕ್ಷಮೆಯಾಚಿಸದಿದ್ದಲ್ಲಿ ಎಲ್ಲಾ ಕೊಡವ ಸಮಾಜಗಳು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ನಾಪೋಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಎಂ.ಅಯ್ಯಪ್ಪ, ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್, ಪಟ್ರಪಂಡ ರಘು ನಾಣಯ್ಯ, ಪವನ್ ಪೆಮ್ಮಯ್ಯ, ಕುಕ್ಕೇರ ಜಯಾಚಿಣ್ಣಪ್ಪ, ಸುವಿನ್ ಗಣಪತಿ, ಕುಲ್ಲಚಂಡ ಪೊನ್ನಪ್ಪ,, ಅನಿತಾ ಪೂವಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!