ಗ್ರಾ.ಪಂ.ಚುನಾವಣೆ : ಸುಸಜ್ಜಿತವಾಗಿ ನಡೆದ ಮಸ್ಟರಿಂಗ್ ಕಾರ್ಯ

December 21, 2020

ಮಡಿಕೇರಿ ಡಿ.21 : ಗ್ರಾಮ ಪಂಚಾಯತ್ ಚುನಾವಣೆ ಸಂಬಂಧಿಸಿದಂತೆ ಮತದಾನಕ್ಕೆ ಮುನ್ನ ದಿನವಾದ ಡಿಸೆಂಬರ್, 21 ರಂದು ಮಡಿಕೇರಿ, ಕುಶಾಲನಗರ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಮಸ್ಟರಿಂಗ್ ಕಾರ್ಯ ನಡೆಯಿತು.
ನಗರದ ಸಂತ ಜೋಸೆಫರ ಪ್ರೌಢಶಾಲೆ, ಸೋಮವಾರಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಮಸ್ಟರಿಂಗ್ ಕಾರ್ಯದಲ್ಲಿ ಎಲ್ಲಿ ನೋಡಿದರೂ ಅಧಿಕಾರಿ ಮತ್ತು ಸಿಬ್ಬಂದಿಗಳು ಚುನಾವಣಾ ಸಾಮಗ್ರಿಗಳನ್ನು ಹಿಡಿದು ವಾಹನಗಳತ್ತ ಸಾಗುವ ದೃಶ್ಯ ಕಂಡುಬಂದಿತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಚುನಾವಣಾ ವೀಕ್ಷಕರಾದ ಎ.ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎ.ಆರ್.ರೂಪಾ, ಚುನಾವಣಾ ಮೇಲ್ವಿಚಾರಕರಾದ ನಿಲೇಶ್ ಸಿಂಧೆ, ಡಿವೈಎಸ್‍ಪಿ ದಿನೇಶ್ ಕುಮಾರ್ ಅವರು ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಗ್ರಾ.ಪಂ.ಚುನಾವಣೆ ಸಂಬಂಧ ಒಟ್ಟು 157 ವಾಹನಗಳನ್ನು ನಿಯೋಜಿಸಲಾಗಿದೆ. 53 ಬಸ್ಸುಗಳು, 30 ಮಿನಿ ಬಸ್ಸು, 27 ಮ್ಯಾಕ್ಸಿಕ್ಯಾಬ್, 58 ಜೀಪು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಕೆಲವೊಂದು ಆನೆ ಹಾವಳಿ ಹೆಚ್ಚಿರುವ ಪ್ರದೇಶಗಳ ಮತಗಟ್ಟೆಗಳಲ್ಲಿ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಸಿಬ್ಬಂದಿಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಡಿಸೆಂಬರ್, 22 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್-19 ಪಾಸಿಟಿವ್ ಸೋಂಕಿತರು ಸಂಜೆ 4 ಗಂಟೆಯಿಂದ 5 ರವರೆಗೆ ಪಿಪಿಇ ಕಿಟ್ ಧರಿಸಿ ಮುಂಜಾಗ್ರತೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮತದಾನದ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದರು.
ತಹಶೀಲ್ದಾರ್ ಮಹೇಶ್, ತಾ.ಪಂ.ಇಒ ಲಕ್ಷ್ಮಿ, ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಇತರರು ಇದ್ದರು.
ಮಡಿಕೇರಿ ತಾಲ್ಲೂಕಿನ 108 ಕ್ಷೇತ್ರಗಳಲ್ಲಿ 267 ಸ್ಥಾನಗಳಿದ್ದು, 676 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನಲ್ಲಿ 177 ಕ್ಷೇತ್ರಗಳಿಗೆ 462 ಸ್ಥಾನಗಳಿದ್ದು, 1488 ಮಂದಿ ಕಣದಲ್ಲಿದ್ದಾರೆ.
ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ಮೊದಲ ಹಂತದಲ್ಲಿ ಮಡಿಕೇರಿ ತಾಲ್ಲೂಕಿನ (26) ಮತ್ತು ಸೋಮವಾರಪೇಟೆ ತಾಲ್ಲೂಕಿನ (40) ಒಟ್ಟು 66 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆಯುತ್ತಿದೆ. ಗ್ರಾ.ಪಂ.ಚುನಾವಣೆ ಸಂಬಂಧ ಮಡಿಕೇರಿ(135) ಮತ್ತು ಸೋಮವಾರಪೇಟೆ ತಾಲ್ಲೂಕಿನ(222) ಒಟ್ಟು 357 ಮತಗಟ್ಟೆಗಳಲ್ಲಿ ಡಿಸೆಂಬರ್, 22 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಗೆ ನಿಯೋಜನೆಗೊಂಡಿರುವ ವಿವಿಧ ಹಂತದ ಚುನಾವಣಾಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದರು. ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಲು ಪ್ರತ್ಯೇಕವಾಗಿ ಕೊಠಡಿ ತೆರೆಯಲಾಗಿತ್ತು. ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸುಗಮವಾಗಿ ತಮ್ಮ ತಮ್ಮ ಮತಗಟ್ಟೆಗಳಿಗೆ ತಂಡಗಳೊಂದಿಗೆ ತೆರಳಲು ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಮತದಾರರು ನಿರ್ಭೀತಿಯಿಂದ ಮತಹಕ್ಕು ಚಲಾಯಿಸಲು ಕ್ರಮವಹಿಸಲಾಗಿದೆ. ಅಗತ್ಯ ಇರುವ ಕಡೆಗಲ್ಲಿ ಜಿಲ್ಲಾ ಶಸಸ್ತ್ರ ಪಡೆ, ಪ್ರತಿ ಮತಗಟ್ಟೆಗಳಲ್ಲಿ ಪೊಲೀಸ್ ಅಥವಾ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಶಾಂತಿಯುತ ಮತದಾನಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.

error: Content is protected !!