ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘಕ್ಕೆ 37.94 ಲಕ್ಷ ರೂ. ಲಾಭ : ಡಿ.24 ರಂದು ಮಹಾಸಭೆ

ಮಡಿಕೇರಿ ಡಿ.21 : ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಪ್ರಸ್ತುತ ಸಾಲಿನಲ್ಲಿ 37.94 ಲಕ್ಷ ರೂ. ಲಾಭವನ್ನು ಗಳಿಸಿದ್ದು, ಸಂಘದ ಮಡಿಕೇರಿಯ ಮುಖ್ಯ ಕಚೇರಿ 41.24 ರೂ. ಗಳಷ್ಟು ನಷ್ಟದಲ್ಲಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 1.26 ಕೋಟಿ ರೂ.ಗಳಷ್ಟು ಲಾಭದಲ್ಲಿದ್ದ ಸಂಘ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಲಾಭದ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸಿದೆ ಎಂದರು.
ಸಂಘದ ಹುಣಸೂರು ಉದ್ದಿಮೆಯಿಂದ 57.27 ಲಕ್ಷ ರೂ. ಹಾಗೂ ಹೆಬ್ಬಾಲೆಯಲ್ಲಿ 79.18 ಲಕ್ಷ ರೂ. ಲಾಭ ಗಳಿಸಲಾಗಿದೆ. ಹಿಂದಿನ ಸಾಲಿನಲ್ಲಿ ಒಟ್ಟು 14.47 ಕೋಟಿ ರೂ. ಕ್ರೋಡೀಕೃತ ನಷ್ಟವಾಗಿದ್ದು, ವರದಿ ಸಾಲಿನ ವರ್ಷಾಂತ್ಯಕ್ಕೆ 14.07 ಕೋಟಿ ರೂ. ನಷ್ಟದಲ್ಲಿ ಮುಂದುವರೆಯುತ್ತಿದೆ. ಸದಸ್ಯರುಗಳಿಗೆ ಫಸಲು ಸಾಲವಾಗಿ 35.43 ಲಕ್ಷ ಮತ್ತು ದೀರ್ಘಾವಧಿ ಸಾಲವಾಗಿ 17 ಸಾವಿರ ರೂ. ಗಳನ್ನು ನೀಡಲಾಗಿದೆ. ಸರ್ಕಾರಕ್ಕೆ ಪಾವತಿಸಲು ಬಾಕಿ ಇರುವ ಸಾಲ ದೀರ್ಘಾವಧಿ ಸಾಲ 67.52 ಲಕ್ಷ, ದೀರ್ಘಾವಧಿ ಸಾಲದ ಬಡ್ಡಿ 101.06 ಲಕ್ಷ ಮತ್ತು ರೆಡಿಮೇಬಲ್ ಪಾಲು ಬಂಡವಾಳ 200 ಲಕ್ಷ, ಹೀಗೆ ಒಟ್ಟು 368.58 ಲಕ್ಷ ರೂ. ಪಾವತಿಸಬೇಕಾಗಿದೆ.
ಸಂಘದ ಹುಣಸೂರು ಉದ್ದಿಮೆಯಲ್ಲಿ 221 ಟನ್ಗಳಷ್ಟು ಕಾಫಿ ಸಂಸ್ಕರಣೆ ಕಾರ್ಯಮಾಡಿ 1.40 ಲಕ್ಷ ರೂ. ಆದಾಯ ಗಳಿಸಲಾಗಿದೆ. ವರದಿ ಸಾಲಿನಲ್ಲಿ 5,600 ಕೆ.ಜಿ ಕಾಫಿ ಪುಡಿ ಮಾರಾಟ ಮಾಡಿ 1.20 ಲಕ್ಷ ರೂ. ಲಾಭ ಗಳಿಸಲಾಗಿದೆ ಎಂದು ಎಂ.ಬಿ.ದೇವಯ್ಯ ಮಾಹಿತಿ ನೀಡಿದರು.
::: ಜಾಗ ಮಾರಾಟ ಮಾಡಲ್ಲ :::
ಹುಣಸೂರು ಉದ್ದಿಮೆಯ ಖಾಲಿ ಜಾಗವನ್ನು ಮಾರಾಟ ಮಾಡುವ ನಿರ್ಧಾರವನ್ನು ಕೈಬಿಟ್ಟು ವಸತಿ ಸಮುದಾಯ ಕಟ್ಟಡ, ವಾಣಿಜ್ಯ ಉದ್ದೇಶದ ಕಟ್ಟಡ, ಕಲ್ಯಾಣ ಮಂಟಪ ಮತ್ತಿತರ ಯೋಜನೆಗಳನ್ನು ರೂಪಿಸಲು ಹಾಗೂ ಕೇಂದ್ರ ಸರ್ಕಾರದ ಮೇಕಿಂಗ್ ಇಂಡಿಯಾ ಯೋಜನೆಯಡಿಯಲ್ಲಿ ಬರುವ ಸ್ಟಾರ್ಟ್ಅಪ್ ಕಂಪನಿಗಳಿಗೆ ಗುತ್ತಿಗೆ ಆಧಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನೀಡಲು ಚಿಂತಿಸಲಾಗಿದೆ. ಆರಂಭಿಕ ಬಂಡವಾಳವನ್ನು ನಾಬರ್ಡ್ ಹಾಗೂ ಸರ್ಕಾರದಿಂದ ಪಡೆದುಕೊಳ್ಳಲಾಗುವುದು ಎಂದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಪಡೆದುಕೊಂಡಿದ್ದ ವ್ಯವಸಾಯೇತರ ಸಾಲ ಹಾಗೂ ಫಸಲು ಸಾಲ ಸುಸ್ಥಿಯಾಗಿದ್ದು, ವ್ಯವಸಾಯೇತರ ಸಾಲ 31 ಲಕ್ಷವನ್ನು ಏಕಕಾಲಿಕ ಮತ್ತು ಫಸಲು ಸಾಲವನ್ನು 97 ಮಾಸಿಕ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಡಿಸಿಸಿ ಬ್ಯಾಂಕ್ ಬಡ್ಡಿ ಪಾವತಿಯಲ್ಲಿ ರಿಯಾಯಿತಿ ನೀಡಿರುವುದಲ್ಲದೆ ಮಾಸಿಕ ಕಂತುಗಳ ಅನುಕೂಲವನ್ನು ಮಾಡಿಕೊಟ್ಟಿದೆ. ಇಲ್ಲಿಯವರೆಗೆ ಒಟ್ಟು 64 ಲಕ್ಷ ರೂ. ಗಳನ್ನು ಬ್ಯಾಂಕಿಗೆ ಪಾವತಿಸಲಾಗಿದೆ ಎಂದು ಹೇಳಿದರು.
::: ಕೋರ್ಟ್ ತಡೆಯಾಜ್ಞೆ :::
ಕಾಫಿ ಮಂಡಳಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಸಲು ಪಾವತಿಸಲಾಗಿದೆ. ಬಾಕಿ ಇರುವ ಬಡ್ಡಿಗಾಗಿ ಮಂಡಳಿ ಡಿಕ್ರಿ ಆದೇಶ ಜಾರಿ ಮಾಡಿದ್ದು, ಈ ಸಂಬಂಧ ರಾಜ್ಯ ಉಚ್ಛನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ ಮತ್ತು ನ್ಯಾಯಾಲಯದಲ್ಲಿ 50 ಲಕ್ಷ ರೂ. ಠೇವಣಿ ಇಡಲಾಗಿದೆ. ಬಡ್ಡಿ ವಸೂಲಾತಿ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ದೇವಯ್ಯ ತಿಳಿಸಿದರು.
ಮಡಿಕೇರಿಯ ಸಂಘದ ಕಟ್ಟಡದಲ್ಲಿ ಈ ಸ್ಟ್ಯಾಂಪಿಂಗ್, ಆರ್ಟಿಸಿ ಮತ್ತಿತರ ಸೌಲಭ್ಯಗಳ ಸೇವಾ ಕೇಂದ್ರವನ್ನು ಸಧ್ಯದಲ್ಲೇ ಆರಂಭಿಸಲಾಗುವುದೆಂದರು.
::: ಡಿ.24 ರಂದು ಮಹಾಸಭೆ :::
ಡಿ.22 ರಂದು ನಡೆಯಬೇಕಾಗಿದ್ದ ಸಂಘದ ಮಹಾಸಭೆಯನ್ನು ಅನಿವಾರ್ಯ ಕಾರಣಗಳಿಂದ ಡಿ.24ಕ್ಕೆ ಮುಂದೂಡಲಾಗಿದ್ದು, ನಗರದ ಓಂಕಾರ ಸದನದಲ್ಲಿ ಸಭೆ ನಡೆಯಲಿದೆ ಎಂದು ದೇವಯ್ಯ ತಿಳಿಸಿದರು.
ನಿರ್ದೇಶಕ ಸುವಿನ್ ಗಣಪತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಸಂಘದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ತೆರಳಿ ಮನವಿ ಸಲ್ಲಿಸುವ ಮೂಲಕ ಹುಣಸೂರಿನಲ್ಲಿರುವ 30 ಎಕರೆ ಖಾಲಿ ಜಾಗದಲ್ಲಿ ವಾಣಿಜ್ಯೋದ್ದೇಶಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಪಿ.ಸಿ.ಕಾವೇರಮ್ಮ, ಚೆಟ್ರಂಡ ಲೀಲಾ, ನಾಪಂಡ ರವಿಕಾಳಪ್ಪ ಹಾಗೂ ಉಪಕಾರ್ಯದರ್ಶಿ ಎ.ಎಂ.ದೇಚಮ್ಮ ಉಪಸ್ಥಿತರಿದ್ದರು.
