ಫೆಬ್ರವರಿಯಲ್ಲಿ ಕೊಡಗು ಕನ್ನಡ ಸಾಹಿತ್ಯ ಪರಿಷತ್ತು ಸುವರ್ಣ ಮಹೋತ್ಸವ ಸಂಭ್ರಮಾಚರಣೆ

21/12/2020

ಮಡಿಕೇರಿ ಡಿ.21 : ಜಿಲ್ಲೆಯಲ್ಲಿ 1971ರಲ್ಲಿ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತು 2021ನೇ ಇಸವಿಯಲ್ಲಿ 50ನೇ ವರ್ಷಕ್ಕೆ ದಾಪುಗಾಲಿಡುವ ಸಂಭ್ರಮದಲ್ಲಿದೆ. ಈ ಹಿನ್ನೆಯಲ್ಲಿ ಜಿಲ್ಲಾ ಕಸಾಪ ಮಡಿಕೇರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಸುವರ್ಣ ಮಹೋತ್ಸವ ಹಾಗು ಜಿಲ್ಲಾ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ನಮ್ಮ ತಂಡ ಸುದೀರ್ಘ 5 ವರ್ಷ ಗಳನ್ನು ಅನೇಕ ವಿನೂತನ ಕನ್ನಡಪರ, ಸಾಹಿತ್ಯಪರ ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಕೊಂಡು ಸಾಗಿ ಬಂದಿದೆ. ಕೆಲವೊಂದು ಕಾರ್ಯಕ್ರಮಗಳು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ರಾಜ್ಯ ಕಾರ್ಯಕಾರಿ ಸಮಿತಿ ಮೆಚ್ಚುಗೆಗಳಿಸಿ ರಾಜ್ಯ ಪ್ರಶಸ್ತಿ ಪಡೆದಿರುವುದನ್ನು ನೆನಪಿಸಿದರು. 2021ರ ಮಾರ್ಚ್ ಅಂತ್ಯಕ್ಕೆ ನಮ್ಮ ಆಡಳಿತದ ಅವಧಿಯು ಮುಕ್ತಾಯವಾಗಲ್ಲಿದ್ದು ಈ ಸಂದರ್ಭದಲ್ಲೇ ಜಿಲ್ಲಾ ಕಾಸಾಪಕ್ಕೆ 50ನೇ ವರ್ಷದ ಸುವರ್ಣ ಸಂಭ್ರಮ ನಡೆಸು ಸೌಭಾಗ್ಯ ನಮ್ಮ ತಂಡಕ್ಕೆ ಒದಗಿ ಬಂದಿದೆ, ಜಿಲ್ಲಾ 15ನೇ ಸಮ್ಮೇಳನವನ್ನು ಒಟ್ಟು ಗೂಡಿಸಿ 3 ದಿನಗಳ ಕಾಲ ಮಡಿಕೇರಿ ನಗರದಲ್ಲಿ ನಡೆಸುವಂತೆ ತಿಳಿಸಿದರು.
ಫೆಬ್ರವರಿ 11,12,13 ರಂದು ನಗರದ ಕಾವೇರಿ ಹಾಲ್ ನಲ್ಲಿ ನಡಸುವಂತೆ ಸಭೆಯು ಒಪ್ಪಿಗೆ ನೀಡಿತು. ಈ ಸಮ್ಮೇಳನದಲ್ಲಿ ಆರಂಭದಿಂದ ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ದುಡಿದ ಜಿಲ್ಲಾ ಅಧ್ಯಕ್ಷರು, ತಾಲ್ಲೂಕು ಹಾಗು ಹೋಬಳಿ ಘಟಕಗಳ ಅಧ್ಯಕ್ಷರುಗಳಿಗೆ ಗೌರವ ಸಮರ್ಪಣೆ ನೀಡಲು ತೀರ್ಮಾನಿಸಲಾಯಿತು. ಈ ಜಿಲ್ಲಾ ಮಟ್ಟದ ಸನ್ಮಾನ ಹಾಗು ಕವಿಗೋಷ್ಟಿ ಕಾರ್ಯಕ್ರಮಕ್ಕೆ ಒಂದು ದಿನ ಮೀಸಲಿಡುವಂತೆ ಸಭೆ ತೀರ್ಮಾನಿಸಲಾಯಿತು.
ಸಮ್ಮೇಳನದ ಮೊದಲ ದಿನ ನಗರದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿ ಸಮ್ಮೇಳನ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ, ಎರಡನೇ ದಿನ ಜಿಲ್ಲಾ ಮಟ್ಟದ ಸನ್ಮಾನಗಳು, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಮೂರನೇ ದಿನ ಕವಿಗೋಷ್ಠಿ, ಗೀತಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜಿಲ್ಲೆಗೆ ಆಗಮಿಸುವ ಎಲ್ಲಾ ಗಡಿಭಾಗದಲ್ಲಿ, ಪಟ್ಟಣಗಳ ಪ್ರಮುಖ ರಸ್ತೆಗಳು ಕನ್ನಡ ಬಾವುಟ ಹಾಗು ತಳಿರು ತೋರಣಗಳಿಂದ ಅಲಂಕಾರವಾಗಬೇಕು, ಜಿಲ್ಲೆಯಲ್ಲಿ ಸಾಹಿತ್ಯಕ್ಕೆ ದುಡಿದು ಅಮರರಾದವರ ಭಾವಚಿತ್ರಗಳಿಂದ ಕೂಡಿದ ದ್ವಾರಗಳು ಹಾಗು ಅವರ ಮಾಹಿತಿ ಫಲಕಗಳನ್ನು ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಿಸುವಂತೆ ಆಯಾ ತಾಲ್ಲೂಕು ಘಟಕಗಳ ಅಧ್ಯಕ್ಷರುಗಳಿಗೆ ಜವಾಬ್ದಾರಿ ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನೇ ಪ್ರಮುಖ ಸಮಿತಿಗಳ ಸಂಚಾಲಕರನ್ನಾಗಿ ನೇಮಿಸಿ ಕಾರ್ಯೋನ್ಮುಖರಾಗುವಂತೆ ಸೂಚಿಸಲಾಯಿತು.
ಪ್ರಮುಖ ಸಮಿತಿಗಳಾದ ಸನ್ಮಾನ ಸಮಿತಿಗೆ ಗೌರವ ಕಾರ್ಯದರ್ಶಿ ಎನ್.ಎ.ಅಶ್ವಥ್ ಕುಮಾರ್, ಆಹಾರ ಸಮಿತಿಗೆ ನಿರ್ದೇಶಕ ಕೋಡಿ ಚಂದ್ರಶೇಖರ್, ಜಿಲ್ಲಾ ಅಲಂಕಾರ ಸಮಿತಿಗೆ ನಿರ್ದೇಶಕ ಧನಂಜಯ, ಕವಿ ಗೋಷ್ಠಿ ಆಹ್ವಾನ, ನಿರ್ವಹಣೆ ಸಮಿತಿಗೆ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಹಿರಿಯ ಸಾಹಿತಿಗಳ ಭಾವಚಿತ್ರ ದ್ವಾರ ಹಾಗು ಮಾಹಿತಿ ಸಂಗ್ರಹಿಸಿ ಫಲಕ ಅಳವಡಿಕೆ ಸಮಿತಿಗೆ ಕುಶಾಲನಗರ ತಾಲ್ಲೂಕು ಘಟಕ ಕಸಾಪ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ವೇದಿಕೆ ಸಮಿತಿಗೆ ನಿರ್ದೇಶಕರುಗಳಾದ ಉಷಾರಾಣಿ ಹಾಗು ರಂಜಿತಾ ಕಾರ್ಯಪ್ಪ, ಸಾಂಸ್ಕೃತಿಕ ಸಮಿತಿಗೆ ನಿರ್ದೇಶಕ ಕವನ್ ಕಾರ್ಯಪ್ಪ, ಮೆರವಣಿಗೆ ಸಮಿತಿಗೆ ನಿರ್ದೇಶಕ ಫಿಲಿಪ್ ವಾಸ್ ಇವರುಗಳನ್ನು ನೇಮಿಸಲಾಯಿತು. ಉಳಿದ ಸಮಿತಿಗಳಿಗೆ ಮುಂದಿನ ಪೂರ್ವಭಾವಿ ಸಭೆಯಲ್ಲಿ ರಚಿಸುವಂತೆ ತೀರ್ಮಾನಿಸಲಾಯಿತು. ಆ ಸಭೆಗೆ ಜಿಲ್ಲೆಯ ಎಲ್ಲಾ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಕಸಾಪ ಜಿಲ್ಲೆಯ ಎಲ್ಲಾ ಸಲಹಾಸಮಿತಿ ಸದಸ್ಯರುಗಳು , ಪ್ರಮುಖ ಸಂಘ ಸಂಸ್ಥೆಗಳ ಅಧ್ಯಕ್ಷಗಳನ್ನು ಆಹ್ವಾನಿಸಲು ಸಭೆ ಒಮ್ಮತದ ಅಭಿಪ್ರಾಯ ಮಂಡಿಸಿದರು.
3 ದಿನಗಳು ನಡೆಯುವ ಸುವರ್ಣ ಸಂಭ್ರಮ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಮ್ಮತ್ತಿಯ ಮುಂಡೋಣಿ ನಿವಾಸಿ ಜಿಲ್ಲೆಯ ಕೊಡವ ಕನ್ನಡ ದ್ವಿಭಾಷಾ ಸಾಹಿತಿ, ಖ್ಯಾತ ಕಾದಂಬರಿಗಾರ್ತಿ ಮಂಡೇಪಂಡ ಗೀತಾಮಂದಣ್ಣ ಇವರು ನಡೆಸುವಂತೆ ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಯಿತು.
ಪೂರ್ವಭಾವಿ ಸಭೆಯಲ್ಲಿ ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್, ಪದಾಧಿಕಾರಿಗಳಾದ ಲೋಕನಾಥ್ ಅಮ್ಮೆಚೂರು, ಕೊಡಿ ಚಂದ್ರಶೇಖರ್, ಎನ್.ಎ.ಅಶ್ವಥ್ ಕುಮಾರ್, ರಂಜಿತಾ ಕಾರ್ಯಪ್ಪ, ಉಷಾರಾಣಿ,ಫಿಲಿಪ್ ವಾಸ್, ಕವನ್ ಕಾರ್ಯಪ್ಪ,ಧನಂಜಯ,ಕೆ.ಕೆ.ನಾಗರಾಜ ಶೆಟ್ಟಿ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಕುಶಾಲನಗರ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಹಾಜರಿದ್ದರು.