ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.11.56 ಲಕ್ಷ ಲಾಭ

21/12/2020

ಮಡಿಕೇರಿ ಡಿ.21 : ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019-20ನೇ ಸಾಲಿನಲ್ಲಿ ರೂ.11,56,026 ರಷ್ಟು ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ತಿಳಿಸಿದ್ದಾರೆ.
ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ 2019-20ನೇ ಸಾಲಿನ 39ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲೂ ಸಂಘದ ಸದಸ್ಯರು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿ ಸಹಕರಿಸಿದ್ದಾರೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಟ್ ನೀಡಲಾಗಿದೆ ಎಂದರು.
ಸಂಘದಲ್ಲಿ ಒಟ್ಟು 1964 ಸದಸ್ಯರಿದ್ದು, ಪಾಲು ಬಂಡವಾಳ ರೂ. 56,71,410 ಆಗಿದೆ. ಕೃಷಿ ಸಾಲ, ಆಭರಣ ಈಡಿನ ಸಾಲ, ಜಾಮೀನು ಸಾಲ, ಸ್ವ ಸಹಾಯ ಗುಂಪಿನ ಸಾಲ, ಜಂಟಿ ಭಾಗ್ಯತಾ ಗುಂಪಿನ ಸಾಲ, ನಿರಖು ಠೇವಣಿ ಸಾಲ, ಮಾಧ್ಯಮಾವಧಿ ಸಾಲ ಹಾಗೂ ವೇತನಾಧಾರಿತ ಸಾಲ ಸೇರಿದಂತೆ ಒಟ್ಟು 7,32,61,559 ರಷ್ಟ್ಟು ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಸದಸ್ಯರಿಂದ ಶೇ. 96.63ರಷ್ಟು ಸಾಲ ವಸೂಲಾತಿಯಾಗಿದ್ದು, ಸಂಘದಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಶೇ.100 ರಷ್ಟು ಮರುಪಾತಿಯಾಗಿದೆ. ಈಗಾಗಲೇ ಸಂಘದ ನೂತನ ಕಟ್ಟಡವನ್ನು ನಿರ್ಮಿಸಲಾಗಿದ್ದು, ಸದಸ್ಯರ ಅನುಕೂಲಕ್ಕಾಗಿ ಕೃಷಿಗೆ ಸಂಬಂಧಿಸಿದ ಗೊಬ್ಬರ ಹಾಗೂ ಸಿಮೆಂಟನ್ನು ಸಂಘದಿಂದ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗೋದಾಮು ನಿರ್ಮಿಸಲಾಗುವುದೆಂದು ಸಂಜಯ್ ಪೂಣಚ್ಚ ಮಾಹಿತಿ ನೀಡಿದರು.
ಕಾಫಿ ಕಣಿ ನಿರ್ಮಾಣ, ಗೋದಾಮು ನಿರ್ಮಾಣ, ಕೆರೆ ನಿರ್ಮಾಣ ಮತ್ತು ತುಂತುರು ನೀರಾವರಿಗಾಗಿ ಸಂಘದ ವತಿಯಿಂದ ಶೇ.3ರಷ್ಟು ಬಡ್ಡಿ ದರದಲ್ಲಿ ಮಧ್ಯಮಾವಧಿ ಸಾಲ ವಿತರಿಸಲಾಗುತ್ತಿದ್ದು, ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಂಘದ ವತಿಯಿಂದ ಧರ್ಮಾರ್ಥ ನಿಧಿಯಿಂದ 2019-20ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಸದಸ್ಯರ ಮಕ್ಕಳಿಗೆ ತಲಾ ರೂ.2 ಸಾವಿರದಂತೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಅಲ್ಲದೇ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ರೂ.5 ಸಾವಿರ ಸಹಾಯಧನ ನೀಡಲಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ವಾಂಚೀರ ರನ್ನ ಅಜಯಕುಮಾರ್, ನಿರ್ದೇಶಕರುಗಳಾದ ನೆರವಂಡ ಅನೂಪ್ ಉತ್ತಯ್ಯ, ಚೌರೀರ ಪಳಂಗಪ್ಪ, ಐರೀರ ಪಿ.ಪೂಣಚ್ಚ, ಮೇಕಂಡ ಎನ್.ಸುಬ್ರಮಣಿ, ಕರ್ಣಯ್ಯನ ಜೆ.ರಾಧಾಕೃಷ್ಣ, ಕರ್ಣಯ್ಯನ ಬಿ.ಪ್ರಭಾಕರ, ಚೌರೀರ ಅಪ್ಪಣ್ಣ, ಚೆಟ್ಟಿಮಾಡ ಹೇಮಮಾಲಿನಿ, ಹೆಚ್.ಎ.ಹರೀಶ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಕೈಪೆಂಗಡ ನಿಶ್ಮಾ ಕಾವೇರಮ್ಮ ಪ್ರಾರ್ಥಿಸಿ, ಅಧ್ಯಕ್ಷ ಸಂಜಯ್ ಪೂಣಚ್ಚ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡಂಡ ಎಂ.ಸೋಮಣ್ಣ ವರದಿ ವಾಚಿಸಿ, ವಂದಿಸಿದರು.