ದೇವರಕಾಡಿನಲ್ಲಿ ಬೀಟೆ ಮರ ಲೂಟಿ : ವಿರಾಜಪೇಟೆಯಲ್ಲಿ ಪ್ರಕರಣ ದಾಖಲು

21/12/2020

ಮಡಿಕೇರಿ ಡಿ.21 : ದೇವರ ಕಾಡಿನಲ್ಲಿ ಭಾರೀ ಗಾತ್ರದ ಬೀಟೆ ಮರವನ್ನು ಕಡಿದು ಸಾಗಾಟ ಮಾಡಲು ಸಿದ್ಧಗೊಳಿಸಿದ್ದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಬೀರುಗ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, 5 ಲಕ್ಷ ರೂ. ಮೌಲ್ಯದ ಬೀಟೆ ಮರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ತನಿಖೆ ಕೈಗೊಂಡಿದೆ.
ಭಾರೀ ಗಾತ್ರದ ಬೀಟೆ ಮರವನ್ನು ಕಡಿದು ಸಾಗಾಟಕ್ಕೆ ಸಿದ್ಧಗೊಳಿಸಿರುವ ಬಗ್ಗೆ ವಿರಾಜಪೇಟೆ ಸಿಐಡಿ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕಿ ಕು.ವೀಣಾ ನಾಯಕ್ ಅವರಿಗೆ ಮಾಹಿತಿ ದೊರೆತು ದಾಳಿ ನಡೆಸುವ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ. ಬೀಟೆ ಮರದ ತುಂಡುಗಳು 150 ಸಿಎಫ್‍ಟಿ ಇದ್ದು 5 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ವರಿಷ್ಟಾಧಿಕಾರಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕಿ ಕು. ವೀಣಾ ನಾಯಕ್, ಸಿಬ್ಬಂದಿಗಳಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಎಂ.ಬಿ. ಗಣೇಶ್, ಪಿ.ಬಿ. ಮೊಣ್ಣಪ್ಪ, ಎಸ್.ಎಂ. ಯೋಗೇಶ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.