ಮೋಜು ಮಸ್ತಿಗೆ ಅವಕಾಶ ಬೇಡ : ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

December 21, 2020

ಸೋಮವಾರಪೇಟೆ ಡಿ.21 : ಹೊಸ ವರ್ಷಾಚರಣೆಯ ನೆಪದಲ್ಲಿ ಸಾರ್ವಜನಿಕ ಸ್ಥಳಗಳು, ಐತಿಹಾಸಿಕ ಕೋಟೆ, ಪ್ರವಾಸಿ ತಾಣಗಳಲ್ಲಿ ಮೋಜು ಮಸ್ತಿಗೆ ಅವಕಾಶ ಕಲ್ಪಿಸಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ತಹಸೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು.
ದೇಶಾದ್ಯಂತ ಪಾಶ್ಚಾತ್ಯ ಅಂಧಾನುಕರಣೆ ಹೆಚ್ಚುತ್ತಿದ್ದು, ಇದರಿಂದಾಗಿ ಭಾರತೀಯತೆಯ ನೈತಿಕ ಮೌಲ್ಯಗಳು ಹಾಳಾಗುತ್ತಿವೆ. ಕ್ರಿಶ್ಚಿಯನ್ ಕ್ಯಾಲೆಂಡರ್‍ನ ಹೊಸ ವರ್ಷದಂದು ಡಿಸಂಬರ್ ರಾತ್ರಿ ಹಾಗೂ ಜನವರಿ 1ರಂದು ಹೆಚ್ಚು ಮದ್ಯಪಾನ, ದೂಮಪಾನ, ಮೋಜುಮಸ್ತಿಯ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದ್ದು, ಇವುಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಸಮಿತಿಯ ಪ್ರಮುಖರು ಮನವಿಯಲ್ಲಿ ತಿಳಿಸಿದ್ದಾರೆ.
ಈ ದಿನಗಳಂದು ಮೋಜು ಮಸ್ತಿ ಮಾಡಿ ವಾಹನ ಚಲಾಯಿಸುವದು, ಅಪಘಾತ, ಮದ್ಯಪಾನ ಸೇವನೆ ಗಣನೀಯವಾಗಿ ಹೆಚ್ಚುತ್ತಿದೆ. ಯುವ ಜನಾಂಗ ಇಂತಹ ಆಚರಣೆಗಳಿಗೆ ಬಲಿಬಿದ್ದು, ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕು ತಹಸೀಲ್ದಾರ್‍ಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ಸಲ್ಲಿಕೆ ಸಂದರ್ಭ ಸಮಿತಿಯ ಲಕ್ಷ್ಮೀಕಾಂತ್, ಕೆ.ಜೆ. ಗಿರೀಶ್, ಸಿ.ಎಸ್. ವಿಕ್ರಮ್, ಜಯಂತ್ ಅವರುಗಳು ಉಪಸ್ಥಿತರಿದ್ದರು.

error: Content is protected !!