ಐನ್‍ಮನೆ ವಿಚಾರಸಂಕಿರಣ : ಐನ್‍ಮನೆ ಕೊಡವ ಸಂಸ್ಕೃತಿಯ ಕೇಂದ್ರ ಬಿಂದು : ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ ಅಪ್ಪಣ್ಣ

22/12/2020

ಮಡಿಕೇರಿ ಡಿ. 22 : ಐನ್‍ಮನೆಯು ಕೊಡವ ಸಂಸ್ಕೃತಿಯ ಕೇಂದ್ರ ಬಿಂದುವಾಗಿದ್ದು, ಅದನ್ನು ಪ್ರತಿಯೊಬ್ಬರೂ ಸಂರಕ್ಷಿಸುವ ಕೆಲಸವಾಗಬೇಕು ಹಾಗೂ ಪ್ರತಿ ಕುಟುಂಬದಲ್ಲಿ ಟ್ರಸ್ಟ್‍ನ್ನು ರಚಿಸಿ ಐನ್‍ಮನೆಯನ್ನು ಸಂರಕ್ಷಿಸಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ ಅಪ್ಪಣ್ಣ ಕರೆ ನೀಡಿದ್ದಾರೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ ಇವರ ಸಹಯೋಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ “ಐನ್‍ಮನೆಯ ಬಗ್ಗೆ ವಿಚಾರಸಂಕಿರಣ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡವ ಸಂಸ್ಕøತಿಯು ಇತ್ತಿಚ್ಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದ್ದು, ಕೊಡವ ಸಂಸ್ಕøತಿ ಮತ್ತು ಭಾಷೆಯನ್ನು ಉಳಿಸಲು ನಾವೆಲ್ಲ ಮುಂದಾಗಬೇಕೆಂದು ಸಲಹೆ ನೀಡಿದರು.
ಐನ್‍ಮನೆಯು ಪೂರ್ವಜರಿಂದ ನಿರ್ಮಾಣವಾಗಿದ್ದು, ಇದಕ್ಕೆ ಬಳಸಿದ ಮರಗಳನ್ನು ಕಾರ್ಬನ್ 14 ಪರೀಕ್ಷೆಗೆ ಒಳಪಡಿಸಿದರೆ ಐನ್‍ಮನೆಗೆ ಐತಿಹಾಸಿಕ ಇತಿಹಾಸವಿರುವುದು ತಿಳಿಯುತ್ತದೆ. ಕುಟುಂಬದ ಸಂಸ್ಕøತಿ ಇದೀಗ ಮರೆಯಾಗಿರುವುದರಿಂದ ಮೂಲವನ್ನು ಕೊಡವರು ಮರೆಯುತ್ತಿದ್ದಾರೆ. ಕೊಡಗಿನಿಂದ ವಲಸೆ ಹೋಗುತ್ತಿರುವುದು ತಪ್ಪಲ್ಲ ಆದರೆ ಐನ್‍ಮನೆ ಸಂಸ್ಕøತಿ ಮರೆಯುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಿ ವ್ಯಾನಿಷಿಂಗ್ ಕೊಡವಾಸ್ ಪುಸ್ತಕದ ಲೇಖಕಿ ಕಂಬೀರಂಡ ಕಾವೇರಿ ಪೊನ್ನಪ್ಪ ಐನ್‍ಮನೆಸ್ ದ ಕಾಂಟೆಕ್ಸ್ಟ್ ಅಂಡ್ ಕಂಟಿನ್ಯೂಯಿಟಿ ಎಂಬ ವಿಷಯದ ಕುರಿತಾಗಿ ದಿಕ್ಸೂಚಿ ಭಾಷಣ ಮಾಡಿ, ಐನ್‍ಮನೆಯು ಕೊಡವ ಸಂಸ್ಕøತಿಯ ಅಸ್ಮಿತೆಯಾಗಿದೆ ಎಂದರು.
ಐನ್‍ಮನೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಇತ್ತೀಚಿಗೆ ಜಾಗತೀಕರಣ ಸಂಸ್ಕøತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಐನ್‍ಮನೆಗಳ ವಿನ್ಯಾಸ, ಮಹತ್ವ, ಪಾತ್ರಗಳು ಗಮನಿಸಿದರೆ ಅದರ ಐತಿಹಾಸಿಕ ಸ್ಥಾನಮಾನಗಳು ಅರಿವಿಗೆ ಬರುತ್ತದೆ. ಆರ್ಥಿಕ, ರಾಜಕೀಯ, ಸಂಸ್ಕøತಿಯ ಕೇಂದ್ರಬಿಂದು ಐನ್‍ಮನೆಗಳಾಗಿದೆ. ಅಲ್ಲಿರುವ ಕೈಮಡ, ಬೋಟಿ, ಕನ್ನಿಕಂಬ, ಭಂಡಾರಪೊಟ್ಟಿ, ನೆಲ್ಲಕ್ಕಿ ನಡುಬಾಡೆ, ಕೈಯಾಲೆ, ವರ್ಷಂಪ್ರತಿ ನಡೆಯುವ ಗುರು ಕಾರೋಣ, ತೆರೆ, ಕಾವೇರಿ ಚಂಗ್ರಾಂದಿ, ಪುತ್ತರಿ, ಕೈಲ್‍ಪೋಲ್ದ್ ಕೊಡವ ಸಂಸ್ಕøತಿಯ ಒಂದು ಧಾರ್ಮಿಕ ಸಂಕೇತವಾಗಿದೆ. ಐನ್‍ಮನೆ ಕುಟುಂಬವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಕುಟುಂಬದ ತಕ್ಕ ಮುಖ್ಯಸ್ಥರು ಸಮರ್ಥವಾಗಿ ಕುಟುಂಬವನ್ನು ಮುನ್ನಡೆಸುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಚೌರೀರ ಜಗತ್ ತಿಮ್ಮಯ್ಯ ಮಾತನಾಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇಂದಿನ ಯುವ ಸಮೂಹಕ್ಕೆ ಇದರ ಮಹತ್ವವನ್ನು ಅರಿಯಲು ಸಹಕಾರಿಯಾಗಲಿದೆ. ಅಲ್ಲದೇ ಪ್ರತಿ ಕುಟುಂಬದ ಹಿರಿಯರು ತಮ್ಮ ಮಕ್ಕಳಿಗೆ ಇದರ ಬಗ್ಗೆ ಮನವರಿಕೆ ಮಾಡಿದರೆ ನಮ್ಮ ಕೊಡವ ಸಂಸ್ಕøತಿಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಐನ್‍ಮನೆಯು ಕೇವಲ ಒಂದು ಮನೆಯಲ್ಲ ಅದು ಕೊಡವ ಸಂಸ್ಕøತಿಯ ಮೂಲವಾಗಿದೆ. ಸಾಹಿತ್ಯ ಬೆಳೆಯಬೇಕಾದರೆ ಕೊಡವ ಸಂಸ್ಕøತಿ ಆಚಾರ-ವಿಚಾರ ಪದ್ಧತಿಗಳ ಸಂಶೋಧನೆಯಾಗಬೇಕು ಹಾಗೂ ಇವುಗಳ ಬಗ್ಗೆ ವಿಚಾರಸಂಕಿರಣ ಕಾರ್ಯಕ್ರಮಗಳನ್ನು ಅಕಾಡೆಮಿ ನಡೆಸುತ್ತಿರುವುದರಿಂದ ಯುವ ಮಕ್ಕಳಿಗೆ ಇದರ ಅರಿವುಮೂಡುತ್ತದೆ ಎಂದರು.

ನಾವು ಎಲ್ಲೇ ಇದ್ದರು ನಮ್ಮ ಸಂಸ್ಕøತಿ ಆಚಾರ ವಿಚಾರವನ್ನು ಮರೆಯಬಾರದು. ಐನ್‍ಮನೆ ಬಗ್ಗೆ ಅರಿವು ಇದ್ದರೆ ಮಾತ್ರ ಅದರ ಮಹತ್ವ ತಿಳಿಯುತ್ತದೆ ಎಂದರು.
ಸಭಾ ಕಾರ್ಯಕ್ರಮದ ಮೊದಲಿಗೆ ಕಂಬೇಯಂಡ ಡೀನಾ ಅವರು ಸಂಗ್ರಹಿಸಿರುವ ಕೊಡಗಿನ ವಿವಿಧಡೆಗಳಲ್ಲಿರುವ 150ಕ್ಕೂ ಹೆಚ್ಚಿನ ಐನ್‍ಮನೆಗಳ ಛಾಯಾಚಿತ್ರದ ಪ್ರದರ್ಶನಕ್ಕೆ ಕಂಬೀರಂಡ ಕಾವೇರಿ ಪೊನ್ನಪ್ಪ ಚಾಲನೆ ನೀಡಿದರು.
ವಿಚಾರಗೋಷ್ಠಿ-1ರಲ್ಲಿ ಕೊಡಗಿನ ಐನ್‍ಮನೆ ಅಂದು ಇಂದು ಎಂಬ ವಿಷಯದ ಬಗ್ಗೆ ಹಿರಿಯ ಸಂಶೋಧಕಿ ಐನ್‍ಮನೇಸ್ ಆಫ್ ಕೊಡಗು ಪುಸ್ತಕದ ಲೇಖಕಿ ಡಾ. ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ ಇವರು ವಿಡಿಯೋ ಮೂಲಕ ಮುಖ್ಯ ಭಾಷಣ ಮಾಡಿದರು. ವಿಚಾರಗೋಷ್ಠಿ-2ರಲ್ಲಿ “ಐನ್‍ಮನೆ ಪುಶ್ಚೇತನದ ಕುರಿತು ಆರ್ಕಿಟೆಕ್ಟ್ ನಡಿಕೇರಿಯಂಡ ಧ್ಯಾನ್ ಚಿಣ್ಣಪ್ಪ ಇವರು ಐನ್‍ಮನೆಗಳ ವಿನ್ಯಾಸದ ಬಗ್ಗೆ ಹಾಗೂ ವಿಚಾರಗೋಷ್ಠಿ- 3ರಲ್ಲಿ “ಕೊಡಗ್‍ರ ಕೈಮಡ”ದ ಕುರಿತು ಮಾದೇಟಿರ ಬೆಳ್ಯಪ್ಪ ಹಾಗೂ ವಿಚಾರಗೋಷ್ಠಿ- 4ರಲ್ಲಿ ಐನ್‍ಮನೆರ ನಿರ್ವಹಣೆಲ್ ಯುವ ಜನಾಂಗತ್‍ರ ಜವಾಬ್ದಾರಿ ವಿಷಯದ ಕುರಿತಾಗಿ ಚೋಕಂಡ ಸೂರಜ್ ಸೋಮಯ್ಯ ಇವರುಗಳು ವಿಚಾರಮಂಡನೆ ಮಾಡಿದರು. ಮುಖ್ಯಅತಿಥಿಗಳಾಗಿ ಪ್ರೊ. ವೀಣಾ ಪೂಣಚ್ಚ, ಬಡಕಡಮ್ಮಂಡ ಕಸ್ತೂರಿ ಗೋವಿಂದಮ್ಮಯ್ಯ, ನಾಗೇಶ್ ಕಾಲೂರು, ಪುತ್ತಾಮನೆ ಅನಿತಾ ಜೀವನ್ ಭಾಗವಹಿಸಿದ್ದರು.
ವಿಚಾರಗೋಷ್ಠಿ-5ರಲ್ಲಿ ಸಾರ್ವಜನಿಕರಿಗೆ “ಐನ್‍ಮನೆಗೆ ಸಂಬಂಧಪಟ್ಟ ವಿಚಾರಮಂಡನೆ”ಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಿಲ್ಲಾಜಮ್ಮನ ನಾ. ಸೋಮೇಶ್, ಅಣ್ಣಾಳಪಂಡ ಧರ್ಮಶೀಲ ಅಜಿತ್ ಭಾಗವಹಿಸಿದ್ದರು.
ಇದರೊಂದಿಗೆ ಕಾರ್ಯಕ್ರಮದಲ್ಲಿ ಎಫ್.ಕೆ.ಎಂ.ಸಿ. ಕಾಲೇಜಿನ ವಿದ್ಯಾರ್ಥಿ ಕಾವೇರಮ್ಮ ಪ್ರಾರ್ಥಿಸಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾರ್‍ರಾದ ಅಜ್ಜಿಕುಟ್ಟಿರ ಸಿ. ಗಿರೀಶ್ ಇವರು ಸ್ವಾಗತಿಸಿದರು. ಹಾಗೂ ಕಾರ್ಯಕ್ರಮದ ಸಂಚಾಲಕರಾದ ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ, ತೇಲಪಂಡ ಕವನ್ ಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿ, ಪ್ರೊ. ಕಾಳಿಮಾಡ ಪೂಣಚ್ಚ ಇವರು ವಂದಿಸಿದರು. ಅಕಾಡೆಮಿಯ ಸದಸ್ಯರಾದ ಮಾಚಿಮಾಡ ಜಾನಕಿ ಹಾಗೂ ಕುಡಿಯರ ಮುತ್ತಪ್ಪ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನವನ್ನು ನಡೆಸಲಾಯಿತು.