ಪ್ರವಾಸಿತಾಣಗಳ ಮೇಲೆ ನಿಗಾ ಅಗತ್ಯ : ಮಡಿಕೇರಿ ಮಹಿಳಾ ಕಾಂಗ್ರೆಸ್ ಒತ್ತಾಯ

22/12/2020

ಮಡಿಕೇರಿ ಡಿ.22 : ಇತ್ತೀಚಿನ ದಿನಗಳಲ್ಲಿ ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರವಾಸಿತಾಣಗಳಲ್ಲಿ ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ತಕ್ಷಣ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತುಕೊಂಡು ಪ್ರವಾಸಿತಾಣಗಳ ಮೇಲೆ ನಿಗಾ ಇರಿಸಬೇಕೆಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜಾಸೀಟು, ಅಬ್ಬಿಫಾಲ್ಸ್ ಸೇರಿದಂತೆ ಹೆಸರುವಾಸಿ ಪ್ರವಾಸಿತಾಣಗಳಿಗೆ ಪ್ರತಿದಿನ ನೂರಾರು ಪ್ರವಾಸಿಗರ ಆಗಮನವಾಗುತ್ತಿದ್ದು, ಕೋವಿಡ್ ಬಗ್ಗೆ ಯಾವುದೇ ಆತಂಕವಿಲ್ಲದೆ ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿ ಕುರಿತು ಸಲಹೆ ನೀಡುವ ಸ್ಥಳೀಯರ ವಿರುದ್ಧವೇ ಪ್ರವಾಸಿಗರು ದರ್ಪದಿಂದ ವರ್ತಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕವೇ ಸಿಬ್ಬಂದಿಗಳನ್ನು ಅಥವಾ ಪೊಲೀಸರನ್ನು ನಿಯೋಜಿಸಿ ನಿಗಾ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ರಾಜಾಸೀಟು ಉದ್ಯಾನವನದಲ್ಲಿ ಪ್ರವಾಸಿಗರು ಮಾಸ್ಕ್ ಧರಿಸದೆ ಮತ್ತು ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ ಗುಂಪು ಗುಂಪಾಗಿ ಅಡ್ಡಾಡುತ್ತಿದ್ದುದ್ದನ್ನು ಗಮನಿಸಿ ಪೊಲೀಸ್ ಠಾಣೆಗೆ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಹೆಚ್ಚಾಗಿ ಹೊರ ರಾಜ್ಯಗಳ ಪ್ರವಾಸಿಗರು ನಿಯಮ ಉಲ್ಲಂಘಿಸುತ್ತಿದ್ದು, ಆಡಳಿತ ವ್ಯವಸ್ಥೆ ಇವರನ್ನು ನಿಯಂತ್ರಿಸಬೇಕಾಗಿದೆ. ಉದ್ಯಾನವನದ ಪ್ರವೇಶಕ್ಕಾಗಿ ಶುಲ್ಕ ಪಾವತಿಸುವಾಗಲೇ ಕೋವಿಡ್ ಮಾರ್ಗಸೂಚಿಯ ಕರಪತ್ರಗಳನ್ನು ಪ್ರವಾಸಿಗರಿಗೆ ನೀಡಬೇಕು. ನಿಯಮ ಮೀರುವವರಿಗೆ ದಂಡ ವಿಧಿಸಬೇಕು, ಸ್ವಚ್ಛತೆ ಕಾಪಾಡಬೇಕು ಮತ್ತು ಪ್ರವಾಸಿತಾಣಗಳಲ್ಲಿ ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಪಾರ್ವತಿ ಫ್ಯಾನ್ಸಿ ಒತ್ತಾಯಿಸಿದ್ದಾರೆ.