ಐರ್ವನಾಡು ವಸತಿ ಸಮುಚ್ಚಯ ಮತ್ತು ಆಧುನೀಕೃತ ಮದರಸ ಉದ್ಘಾಟನೆ

22/12/2020

ಮಡಿಕೇರಿ ಡಿ. 22 : ಐವರ್ನಾಡು ಮುಹಿದ್ದೀನ್ ಜುಮಾ ಮಸೀದಿ ವತಿಯಿಂದ ನಿರ್ಮಿಸಿದ ವಸತಿ ಸಮುಚ್ಚಯ ಮತ್ತು ಆಧುನೀಕೃತ ಮದರಸವನ್ನು ಪ್ರಸಿದ್ಧ ಸೂಪಿ ವರ್ಯರಾದ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರ ಪರಾಯಣದೊಂದಿಗೆ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಹಿದ್ ಐರ್ವನಾಡಿನಂತಹ ಗ್ರಾಮೀಣ ಪ್ರದೇಶದಲ್ಲಿ ಎನ್.ಎಂ. ಬಾಲಕೃಷ್ಣ ಗೌಡ ಅವರು ಮುತುವರ್ಜಿ ವಹಿಸಿ ಮಸೀದಿ, ಮದರಸ ಮಾಡಲು ಸ್ಥಳದಾನ ನೀಡಿದಲ್ಲದೆ ಕೋಮು ಸೌಹಾರ್ದ ಬೆಳೆಯಲು ಭದ್ರ ಬುನಾದಿ ಹಾಕಿದವರು ಎಂದರು.
ಪ್ರತಿಯೊಬ್ಬರು ಜಾತ್ಯಾತೀತ ಮನೋಭಾವದಿಂದ ಪರಧರ್ಮ ಸಹಿಷ್ಣುತೆಯೊಂದಿಗೆ ಹೃದಯ ವೈಶಾಲ್ಯ ಮತ್ತು ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಬೇಕು, ಮದರಸದಲ್ಲಿ ಆಧುನಿಕತೆಗೆ ತಕ್ಕಂತೆ ಕಂಪ್ಯೂಟರ್ ನಂತಹ ಯೋಗ್ಯ ಶಿಕ್ಷಣ ನೀಡಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಶಾಹಿದ್ ಹೇಳಿದರು.
ಮಾಜಿ ಸಚಿವ ಜಮೀರ್ ಅಹ್ಮದ್ ಸುಳ್ಯಕ್ಕೆ ಬಂದ ಸಂದರ್ಭದಲ್ಲಿ ಈ ಮಸೀದಿಗೆ ಭೇಟಿ ನೀಡಿದರ ಫಲವಾಗಿ ಮಸೀದಿ ಮತ್ತು ಮದರಸಕ್ಕೆ ಸುಮಾರು ರೂ. 20 ಲಕ್ಷ ಅನುದಾನ ನೀಡಿರುವುದನ್ನು ಸ್ಮರಿಸಿ, ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭ ಮಾಡನ್ನೂರು ನೂರಲ್ ಹುಧಾ ಎಜುಕೇಶನ್ ಸೆಂಟರ್ ನಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪಡೆದ ಅಬ್ದುಲ್ ರಹಿಮಾನ್ ಶಹಿಮ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಧಾರ್ಮಿಕ ಉಪನ್ಯಾಸ ನಡೆಯಿತು. ಪ್ರಸಿದ್ದ ವಾಗ್ಮಿ ವಿ.ಕೆ.ಹನೀಫ್ ನಿಝಾಮಿ ಮೊಗ್ರಾಲ್ ಪುತ್ತೂರು ಅವರಿಂದ ಪ್ರಭಾಷಣ ನಡೆಯಿತು. ಖತೀಬ್ ಅಬ್ದುಲ್ ಖಾದರ್ ಫೈಝಿ ದುವಾ ನೆರವೇರಿಸಿದರು

ಜಮಾಅತ್ ಅಧ್ಯಕ್ಷ ಜುನೈದ್ ನಿಡುಬೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಎಸ್.ಎನ್.ಮನ್ಮಥ್, ಸುಳ್ಯ ನಗರ ಮಾಜಿ ಅಧ್ಯಕ್ಷ ಸಂಶುದ್ದೀನ್, ಮಾಜಿ ಸದಸ್ಯ ಕೆ.ಎಂ.ಮುಸ್ತಫ, ನ್ಯಾಯಾವಾದಿ ಮತ್ತು ನೊಟರಿ ಫವಾಝ್ ಕನಕಮಜಲು, ಸಿದ್ದೀಕ್ ಕೊಕ್ಕೊ ಮೊದಲಾದವರು ಉಪಸ್ಥಿತರಿದ್ದರು.