ಸೋಮವಾರಪೇಟೆಯಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

December 23, 2020

ಮಡಿಕೇರಿ ಡಿ. 23 : ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಪ್ರದೀಪ್ ತಿಳಿಸಿದ್ದಾರೆ.
ಸೋಮವಾರಪೇಟೆ ಪಟ್ಟಣದ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ತಾಲೂಕು ನಿವೃತ್ತ ಸರ್ಕಾರಿ ನೌಕರರ 23ನೆ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಾಲಿ ಹಾಗೂ ನಿವೃತ್ತ ನೌಕರರು ಒಂದೇ ನಾಣ್ಯದ ಎರೆಡು ಮುಖಗಳಿದ್ದಂತೆ, ಪರಸ್ಪರ ಸಹಕಾರ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕಾಗಿದೆಯೆಂದರು. ಹಾಲಿ ಇರುವ ಕಟ್ಟದಲ್ಲಿ ನಿವೃತ್ತರ ಸಂಘಕ್ಕೂ ಕೊಠಡಿ ನೀಡಲಾಗಿದೆ ಎಂದ ಅವರು ನಿವೇಶನಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಅಗತ್ಯ ಸಹಕಾರ ನೀಡಲಾಗುವುದೆಂದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ನಿವೃತ್ತಿಯ ನಂತರ ಹಿರಿಯ ಜೀವಗಳು ಸಂಕಷ್ಟದ ಬದುಕು ನಡೆಸುವಂತಾಗಿರುವುದು ವಿಪರ್ಯಾಸ. ತಮಗೆ ಸಿಗಬೇಕಾದ ಸವಲತ್ತುಗಳಿಗಾಗಿ ಇಲಾಖೆಯಲ್ಲಿರುವ ಹಾಲಿ ನೌಕರರ ಮುಂದೆ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ ಇದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಅವರು, ನಿವೃತ್ತಿಯ ನಂತರವೂ ಗೌರವ ಸಿಗುವಂತಾಗಬೇಕು ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ ಮಾತನಾಡಿ, 1998 ರಲ್ಲಿ ಆರಂಭಗೊಂಡ ಈ ಸಂಘ ಇಂದು ನಿಮ್ಮೆಲ್ಲರ ಸಹಕಾರದಿಂದ ಉತ್ತಮವಾಗಿ ಬೆಳೆದಿದೆ ಎಂದರು. ಸಂಘದ ವತಿಯಿಂದ ನಿರಕುಠೇವಣಿ ಇಡಲಾಗಿದೆ, ಮರಣನಿಧಿ ಸ್ಥಾಪಿಸಲಾಗಿದೆ ಅಲ್ಲದೇ ಪ್ರತಿವರ್ಷ ಐವರು ಹಿರಿಯ ಸದಸ್ಯರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಸಭೆಯಲ್ಲಿ 15 ಮಂದಿ ಸದಸ್ಯರ ನೂತನ ಆಡಳಿತ ಮಂಡಳಿ ರಚಿಸಲಾಯಿತು.
ಹಿರಿಯ ಸದಸ್ಯರಾದ ಹೆಚ್.ಎಸ್. ಪುಟ್ಟ, ಹೆಚ್.ಹೆಚ್.ಅಣ್ಣಪ್ಪ ಶೆಟ್ಟಿ, ಎಸ್.ಬಿ.ಗೌರಮ್ಮ, ಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಮೃತಪಟ್ಟ ಸದಸ್ಯರಿಗೆ ಮೌನಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ತಾ.ಪಂ ಸದಸ್ಯೆ ತಂಗಮ್ಮ, ಸಂಘದ ಪದಾಧಿಕಾರಿಗಳಾದ ಎ. ಎಂ.ಗುಂಡೇಗೌಡ, ಬಿ.ಕೆ.ತಿಮ್ಮಯ್ಯ, ಸಿ.ಕೆ.ಮಲ್ಲಪ್ಪ, ಹೆಚ್. ಜಿ. ಕುಟ್ಟಪ್ಪ, ಜಿ.ಎ. ಸುಂದರ್, ನಿರ್ಮಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

error: Content is protected !!