ಮಡಿಕೇರಿ ನಗರದಲ್ಲಿ ಬಿರುಸಿನ ಕಾಮಗಾರಿ : ಕೋಟ್ಯಾಂತರ ರೂ. ವೆಚ್ಚದಲ್ಲಿ ರಸ್ತೆ, ತಡೆಗೋಡೆ ನಿರ್ಮಾಣ

December 23, 2020

ಮಡಿಕೇರಿ ಡಿ.23 : ಸಾರ್ವಜನಿಕರಿಂದ ನಿರಂತರ ಟೀಕೆಗೆ ಒಳಗಾಗಿದ್ದ ಮಡಿಕೇರಿ ನಗರಸಭೆ ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದು, ವಿವಿಧೆಡೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಅತಿಯಾದ ಮಳೆ ಮತ್ತು ಕೋವಿಡ್ ಸೋಂಕಿನ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಸಮರ್ಪಕವಾಗಿ ಯಾವುದೇ ಕಾಮಗಾರಿಗಳು ನಡೆದಿರಲಿಲ್ಲ.
ಇದೀಗ ನಗರದಲ್ಲಿ ಭರದಿಂದ ರಸ್ತೆ ಮತ್ತು ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಎಸ್‍ಪಿ ಬಂಗ್ಲೆ ಬಳಿ ಬೃಹತ್ ತಡೆಗೋಡೆಯನ್ನು 1.72 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸಾಯಿ ಅಸ್ಟ್ರೋಟರ್ಫ್ ಮೈದಾನದ ಎದುರು ರೂ.1.45 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಹಳೇಯ ಖಾಸಗಿ ಬಸ್ ನಿಲ್ದಾಣದ ಬಳಿ ರೂ.2.96 ಕೋಟಿಗಳಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಮಳೆಗಾಲದಲ್ಲಿ ತೋಡಿನ ನೀರಿನ ರಭಸದಿಂದ ಹಾನಿಗೊಳಗಾಗಿದ್ದ ಎಲ್‍ಐಸಿ ಬಳಿಯ ರಸ್ತೆಗೆ 9.85 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ನಗರದ ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಪಡಿಸುವ ಮತ್ತು ಡಾಂಬರೀಕರಣ ಮಾಡಲು ಸುಮಾರು 22 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ.
ಮಳೆಹಾನಿ ಪರಿಹಾರದ ಹಣ ಮತ್ತು ನಗರೋತ್ಥಾನದ ಅನುದಾನದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ನಗರಸಭಾ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಆದರೆ ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿಲ್ಲ. ಅಲ್ಲದೆ ನಗರದ ಎಲ್ಲಾ ರಸ್ತೆಗಳು ಡಾಂಬರೀಕರಣಗೊಳ್ಳದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!