ಪ್ರವಾಸೋದ್ಯಮದ ಆಕರ್ಷಣೆ : ಮಡಿಕೇರಿಯಲ್ಲಿ ಹೆಲಿಕಾಫ್ಟರ್ ಜಾಯ್ ರೈಡ್ಸ್

23/12/2020

ಮಡಿಕೇರಿ ಡಿ.23 : ಕೊರೋನಾ ವೈರಸ್ ರೂಪಾಂತರ ಪಡೆದುಕೊಂಡು ಮತ್ತೊಂದು ಅನಾಹುತಕ್ಕೆ ಆಹ್ವಾನ ನೀಡುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಹಲವು ನಿರ್ಬಂಧಗಳನ್ನು ಜಾರಿಗೆ ತಂದಿದೆ. ಕೊಡಗು ಜಿಲ್ಲಾಡಳಿತ ಕೂಡ ಜ.2 ರವರೆಗೆ ಯಾವುದೇ ಅಬ್ಬರದ ಚಟುವಟಿಕೆಗಳು ಬೇಡ ಎಂದು ಆದೇಶಿಸಿದೆ. ಇದರ ನಡುವೆಯೇ ಮಡಿಕೇರಿಯಲ್ಲಿ “ಹೆಲಿಕಾಫ್ಟರ್ ಜಾಯ್ ರೈಡ್ಸ್” ಹೆಸರಿನಲ್ಲಿ ನಡೆಯುತ್ತಿರುವ ಹೆಲಿಕಾಫ್ಟರ್ ಪಯಣ ಭಾರೀ ಸದ್ದು ಮಾಡುತ್ತಿದೆ.
ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆ ಥುಂಬಿ ಪ್ರೈವೆಟ್ ಲಿಮಿಟೆಡ್ ಸ್ಥಳೀಯರ ಸಹಕಾರದೊಂದಿಗೆ ಹೆಲಿಕಾಫ್ಟರ್ ಹಾರಾಟವನ್ನು ಆರಂಭಿಸಿದ್ದು, ಜ.1 ರವರೆಗೆ ಹಾರಾಟ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಹೆಲಿಕಾಫ್ಟರ್ ಮೂಲಕ ಕೊಡಗಿನ ಸೌಂದರ್ಯವನ್ನು ತೋರಿಸುವ ಪ್ರಯೋಗ ಇದಾಗಿದ್ದು, 8 ಹಾಗೂ 15 ನಿಮಿಷದ ಎರಡು ಪ್ಯಾಕೇಜ್‍ಗಳನ್ನು ಮಾಡಲಾಗಿದೆ. 8 ನಿಮಿಷದ ಪಯಣಕ್ಕೆ 3 ಸಾವಿರ ರೂ. ಹಾಗೂ 15 ನಿಮಿಷಕ್ಕೆ 5 ಸಾವಿರ ರೂ. ಶುಲ್ಕ ನಿಗಧಿ ಪಡಿಸಲಾಗಿದೆ.
ನಗರದ ಜಿಲ್ಲಾ ಕ್ರೀಡಾಂಗಣದ ಕೆಳಗಿನ ಮೈದಾನದಿಂದ “ಹೆಲಿಕಾಫ್ಟರ್ ಜಾಯ್ ರೈಡ್ಸ್” ನಡೆಯುತ್ತಿದೆ. ಹೆಲಿಕಾಪ್ಟರ್ ನಿರ್ವಹಣಾ ತಂಡದಲ್ಲಿ ಕ್ಯಾ.ಸಂಜಯ್ ಅಗರ್‍ವಾಲ್, ನಟೇಶ್, ಶರವಣ, ಮಹೇಶ್, ರಂಜಿತ್, ರಾಹುಲ್ ಮತ್ತಿತರರು ಕಾರ್ಯನಿರ್ವಹಿಸುತ್ತಿದ್ದಾರೆ.