ಮಡಿಕೇರಿ ಗಾಂಧಿ ಮೈದಾನದ ತುಂಬಾ ಮಣ್ಣಿನ ರಾಶಿ : ಕ್ರೀಡಾಪಟುಗಳ ಆಕ್ಷೇಪ

23/12/2020

ಮಡಿಕೇರಿ ಡಿ.23 : ಮಡಿಕೇರಿ ನಗರದಲ್ಲಿ ಸೃಷ್ಟಿಯಾಗುತ್ತಿರುವ ಕೆಲವು ಅವ್ಯವಸ್ಥೆಗಳು ಜಿಲ್ಲಾಡಳಿತಕ್ಕೆ ಆಟ, ಆಟಗಾರರಿಗೆ ಮಾನಸಿಕ ಸಂಕಟ ಎನ್ನುವಂತ್ತಾಗಿದೆ. ಕ್ರೀಡಾಕಲಿಗಳ ನಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಡಗು ಜಿಲ್ಲೆಯ ಕೇಂದ್ರಸ್ಥಾನ ಮಡಿಕೇರಿ ನಗರದಲ್ಲಿರುವ ಎಲ್ಲಾ ಆಟದ ಮೈದಾನಗಳನ್ನು ಇನ್ನಿಲ್ಲದಂತೆ ಮಾಡುವ ಪ್ರಯತ್ನಗಳು ನಡೆಯುತ್ತಿದೆಯೇ ಎನ್ನುವ ಸಂಶಯಗಳು ಮೂಡುತ್ತಿದೆ.
ಸಾವಿರಾರು ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಸಾಮಥ್ರ್ಯವನ್ನು ಮೆರೆದ ಜಿಲ್ಲಾ ಕ್ರೀಡಾಂಗಣ ಇಂದು ಕಾಂಕ್ರೀಟ್ ಕಟ್ಟಡಗಳ ಸಂತೆಯಾಗಿದೆ. ಈ ಹಿಂದೆ ಕ್ರೀಡಾ ಸಚಿವರಾಗಿದ್ದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಪ್ರಯತ್ನದಿಂದ ಅನೇಕ ಕಟ್ಟಡಗಳು ಇಲ್ಲಿ ತಲೆ ಎತ್ತಿದವು. ಆದರೆ ಕಟ್ಟಡ ನಿರ್ಮಿಸುವ ಸಂದರ್ಭ ಇದ್ದ ಕಾಳಜಿ ನಿರ್ವಹಣೆಗೆ ತೋರಲಿಲ್ಲ ಎನ್ನುವ ಆರೋಪ ಕ್ರೀಡಾಪಟುಗಳದ್ದು. ಬಹುತೇಕ ಒಳಾಂಗಣ ಕ್ರೀಡಾಂಗಣ ನಿಷ್ಪ್ರಯೋಜಕವೆನಿಸಿದ್ದು, ವಿಶಾಲವಾದ ಮೈದಾನವನ್ನು ಹಾಳು ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬೇಸರವಿದೆ.
ಇದೀಗ 400 ಮೀ ಟ್ರ್ಯಾಕ್ ಸಮೀಪವೇ ಅವೈಜ್ಞಾನಿಕ ರೂಪದಲ್ಲಿ ಶೌಚಾಲಯ ನಿರ್ಮಿಸಿರುವ ಬಗ್ಗೆ ಸ್ಥಳೀಯ ಕ್ರೀಡಾಪಟುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕ್ರೀಡಾಂಗಣಕ್ಕೆ ಶೌಚಾಲಯದ ಅಗತ್ಯವಿದೆ, ಆದರೆ ಟ್ರ್ಯಾಕ್ ಬಳಿಯೇ ನಿರ್ಮಿಸುವ ಅನಿವಾರ್ಯತೆ ಏನಿತ್ತು ಎಂದು ಹಿರಿಯ ಹಾಕಿ ಪಟು ಹಾಗೂ ಜಿಲ್ಲಾ ಕ್ರೀಡಾಂಗಣ ಸಂರಕ್ಷಣಾ ಸಮಿತಿಯ ಪ್ರಮುಖ ಚುಮ್ಮಿದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನೇ ನಗರಸಭೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ, ಇನ್ನು ಕ್ರೀಡಾಂಗಣದ ಶೌಚಾಲಯದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಸ್ವಚ್ಛ ಪರಿಸರದಲ್ಲಿ ಕ್ರೀಡಾಭ್ಯಾಸ ಮತ್ತು ದೈಹಿಕ ಸಾಮಥ್ರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದವರಿಗೆ ಗಬ್ಬೆದ್ದು ನಾರುವ ಶೌಚಾಲಯ ಅಡ್ಡಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
::: ಹೆಲಿಕಾಫ್ಟರ್ ಗೂ ಅವಕಾಶ :::
ಇದೀಗ ಹೆಲಿಟೂರಿಸಂ ಹೆಸರಿನಲ್ಲಿ ಖಾಸಗಿ ಸಂಸ್ಥೆಯೊಂದು ಜ.1 ರವರೆಗೆ ನಡೆಸುತ್ತಿರುವ ಹೆಲಿಕಾಫ್ಟರ್ ಸಂಚಾರಕ್ಕೂ ಜಿಲ್ಲಾ ಕ್ರೀಡಾಂಗಣದ ಕೆಳಗಿನ ಮೈದಾನವನ್ನು ನೀಡಲಾಗಿದೆ. ನಗರದಲ್ಲಿರುವ ಎಲ್ಲಾ ಮೈದಾನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಿಟ್ಟುಕೊಡುತ್ತಿರುವ ಬಗ್ಗೆ ಕ್ರೀಡಾಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
::: ಗಾಂಧಿ ಮೈದಾನದ ತುಂಬಾ ಮಣ್ಣಿನ ರಾಶಿ :::
ನಗರದ ಗಾಂಧಿ ಮೈದಾನದ ಈಗಿನ ದುಸ್ಥಿತಿಯ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟದ ಮೈದಾನದ ತುಂಬಾ ಮಣ್ಣಿನ ರಾಶಿ, ಮರಳು, ಪೈಪ್, ವಿವಿಧ ಕಾಮಗಾರಿಗಳ ಪರಿಕರಗಳನ್ನು ತುಂಬಿಸಲಾಗಿದೆ. ಇಷ್ಟರವರೆಗೆ ಆದಾಯ ಗಳಿಕೆಯ ಕೇಂದ್ರವನ್ನಾಗಿಯೇ ಗಾಂಧಿ ಮೈದಾನವನ್ನು ಬಳಸಿಕೊಳ್ಳುತ್ತಿದ್ದ ನಗರಸಭೆ ಪ್ರಸ್ತುತ ಮಣ್ಣಿನ ರಾಶಿಯಿಂದ ಮೈದಾನವನ್ನೇ ಮುಚ್ಚುವ ಪ್ರಯತ್ನದಲ್ಲಿದ್ದಾರೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.
ಜಿಲ್ಲಾಡಳಿತದ ಭವನಕ್ಕೆ ಮಂಗಳೂರು ರಸ್ತೆಯಲ್ಲಿ ಬೃಹತ್ ತಡೆಗೋಡೆಯನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸಲಾಗಿದೆ. ಈ ಕಾಮಗಾರಿಯ ಮಣ್ಣನ್ನು ತಂದು ಗಾಂಧಿ ಮೈದಾನದಲ್ಲಿ ಸುರಿಯಲಾಗುತ್ತಿದೆ. ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಮಣ್ಣನ್ನು ತೆರವುಗೊಳಿಸಲಾಗುವುದೆಂದು ನಗರಸಭಾ ಅಧಿಕಾರಿಗಳು ಸಮಜಾಯಿಷಿಕೆ ನೀಡಿದ್ದಾರೆ.
ಆದರೆ ಸಾರ್ವಜನಿಕರು ಮೈದಾನದಲ್ಲಿ ಮಣ್ಣಿನ ರಾಶಿ ಹಾಕಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಆಟದ ಮೈದಾನವೇ ಹೊರತು ದಾಸ್ತಾನು ಕೇಂದ್ರವಲ್ಲವೆಂದು ಅಸಮಾಧಾನ ಹೊರ ಹಾಕಿದ್ದಾರೆ.