ಮಡಿಕೇರಿಯಲ್ಲಿ ಜ.1 ರ ವರೆಗೆ ನಡೆಯಲಿದೆ “ಹೆಲಿಕಾಫ್ಟರ್ ಜಾಯ್ ರೈಡ್ಸ್”

ಮಡಿಕೇರಿ ಡಿ.24 : ವರ್ದಾಂತ್ ಅರ್ಥ್ ಡಬ್ಲ್ಯುಟಿಇ ಲಿಮಿಟೆಡ್ ಹಾಗೂ ಥುಂಬೆ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಪ್ರಯುಕ್ತ ನಗರದಲ್ಲಿ “ಹೆಲಿಕಾಫ್ಟರ್ ಜಾಯ್ ರೈಡ್ಸ್” ಜ.1 ರ ವರೆಗೆ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಅಯ್ಯಣ್ಣ ತಿಳಿಸಿದ್ದಾರೆ.
ನಗರದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದ ಕೆಳಗಿನ ಮೈದಾನದಲ್ಲಿ “ಹೆಲಿಕಾಫ್ಟರ್ ಜಾಯ್ ರೈಡ್ಸ್” ನಡೆಯಲಿದ್ದು, ಇದರೊಂದಿಗೆ ಮಡಿಕೇರಿಯ ತ್ಯಾಜ್ಯ ನಿರ್ವಹಣೆ, ಮಾಲಿನ್ಯ ರಹಿತವಾದ ವಾತಾವರಣದ ಕುರಿತು ಅಧಿಕಾರಿಗಳಿಗೆ ಹಾಗೂ ಹೆಲಿಕಾಫ್ಟರ್ನಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಮಾಹಿತಿ ನೀಡಲಾಗುತ್ತಿದೆ ಎಂದರು.
ಈಗಾಗಲೇ ಜಿಲ್ಲಾಡಳಿತದ ಅನುಮತಿ ಮೇರೆಗೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹೆಲಿಕಾಫ್ಟರ್ ಹಾರಾಟವನ್ನು ಆರಂಭಿಸಿದ್ದು, ಉತ್ತಮ ಸ್ಪಂದನೆ ದೊರೆತ್ತಿದೆ. 5 ಹಾಗೂ 15 ನಿಮಿಷದ ಎರಡು ಪ್ಯಾಕೇಜ್ಗಳನ್ನು ಮಾಡಲಾಗಿದ್ದು, 5 ರಿಂದ 7 ನಿಮಿಷದ ಪಯಣಕ್ಕೆ 3 ಸಾವಿರ ರೂ. ಹಾಗೂ 15 ನಿಮಿಷಕ್ಕೆ 5,500 ರೂ.ಶುಲ್ಕ ನಿಗಧಿ ಪಡಿಸಲಾಗಿದೆ. ಹೆಲಿಕಾಫ್ಟರ್ ನಿರ್ವಹಣಾ ತಂಡದಲ್ಲಿ ಕ್ಯಾ.ಸಂಜಯ್ ಅಗರ್ವಾಲ್, ನಟೇಶ್, ಶರವಣ, ಮಹೇಶ್, ರಂಜಿತ್, ರಾಹುಲ್ ಮತ್ತಿತರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಮತ್ತೊಬ್ಬ ನಿರ್ದೇಶಕ ಬಿ.ಸಿ.ಕಾವೇರಪ್ಪ ಮಾತನಾಡಿ, ಸಂಸ್ಥೆ ತ್ಯಾಜ್ಯ ನಿರ್ವಹಣೆ ಮಾಡಿ ಅದನ್ನು ಪರಿವರ್ತಿತ ಶಕ್ತಿಯನ್ನಾಗಿ ಮಾರ್ಪಡಿಸುವ ಕಾರ್ಯದಲ್ಲಿ ತೊಡಗಿದ್ದು, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲೂ ತ್ಯಾಜ್ಯ ನಿರ್ವಹಣೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಪರಿಸರ ಜಾಗೃತಿ ಮೂಡಿಸುವುದು ಮತ್ತು ಮಾಲಿನ್ಯ ರಹಿತ ವಾತಾವರಣ ಸೃಷ್ಟಿಸುವುದು ಸಂಸ್ಥೆಯ ಗುರಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ವಿಕಾಸ್ ಅಚ್ಚಯ್ಯ, ಕೆ.ಗೋಕುಲ್ ಹಾಗೂ ವಿನೋದ್ ಗಣಪತಿ ಉಪಸ್ಥಿತರಿದ್ದರು.

