ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ಆಭರಣ, ಹಣ ದುರುಪಯೋಗದ ಆರೋಪ

December 24, 2020

ಸುಂಟಿಕೊಪ್ಪ ಡಿ.24 : ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ದುರುಪಯೋಗದ ಆರೋಪ ಕೇಳಿ ಬಂದಿದೆ. ಸಹಕಾರ ಸಂಘ ಸದಸ್ಯರ ಶ್ರೇಯೋಭಿವೃದ್ಧಿಗೆ ಒತ್ತಾಸೆ ನೀಡಬೇಕು. ಆದರೆ ಸಂಘದಲ್ಲಿ ಚಿನ್ನಾಭರಣ ಕಳ್ಳತನ, ರೂ.13 ಲಕ್ಷದಷ್ಟು ಹಣ ದುರುಪಯೋಗವಾಗಿರುವುದರಿಂದ ಸಂಘಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ಸದಸ್ಯರು ವಾಗ್ಧಾಳಿ ನಡೆಸಿದರು.
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಶ್ರೀ ಮಂಜನಾಥಯ್ಯ ಸಹಕಾರ ಭವನದಲ್ಲಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ಸಂಘದ ಆಡಳಿತ ಮಂಡಳಿಯ ಮೃದು ಧೋರಣೆಯಿಂದ ಕಳೆದ ವರ್ಷ ಗ್ರಾಹಕರು ಅಡವಿಟ್ಟ ಚಿನ್ನ ಸಂಘದಿಂದ ಕಳ್ಳತನವಾಗಿದೆ. ಸಿ.ಇ ಸೇರಿ ಇಬ್ಬರೂ ಗುಮಾಸ್ತರಿಂದ ಸಂಘಕ್ಕೆ ಚಿನ್ನಾಭರಣದ ಮೌಲ್ಯ ಕಟ್ಟಿಸಲಾಗಿದೆ. ಆದರೆ ಕಳ್ಳತನ ಯಾರೂ ಮಾಡಿದ್ದಾರೆಂದು ಇಂದಿಗೂ ಪತ್ತೆಯಾಗಿಲ್ಲ. ನಿರಾಪರಾಧಿಗಳಿಗೆ ಶಿಕ್ಷಯಾಗಿದೆ. ಚಿನ್ನ ಹೇಗೆ ಮಾಯವಾಯಿತು. ಸಿಸಿ ಕ್ಯಾಮೆರಾ ಇದ್ದರೂ ಕಳ್ಳತನ ಮಾಡಿದವರನ್ನು ಇನ್ನು ಪತ್ತೆ ಹಚ್ಚದಿರುವುದು ಆಡಳಿತ ಮಂಡಳಿಯ ಕಾರ್ಯ ವೈಖರಿಯನ್ನು ಎತ್ತಿ ತೋರಿಸುತ್ತದೆ. ಈ ವರ್ಷ ಆಡಿಟ್ ವರದಿಯಲ್ಲಿ ರೂ.13,72,514 ನಷ್ಟು ಸಂಘದ ಹಣ ದುರುಪಯೋಗವಾಗಿದೆ. ಈ ಬಗ್ಗೆ ಏನು ಕ್ರಮ ಕೈ ಗೊಂಡಿದ್ದೀರಾ ಎಂದು ಕಂಬಿಬಾಣೆಯ ಜವಾಹರ್, ಲವ ಶಾಂತಪ್ಪ, ಕೆ.ಎಂ.ಲಕ್ಷ್ಮಣ್, ಕರುಣಾ, ಕೆ.ಡಿ.ರಾಮಯ್ಯ, ಬಾಲಕೃಷ್ಣ ರೈ ಅವರುಗಳು ತೀವ್ರ ವಾಗ್ಧಾಳಿ ನಡೆಸಿದರು.
ಆಡಳಿತ ಮಂಡಳಿ ಸದಸ್ಯರ ಹಿತ ಕಾಪಾಡುತ್ತಿದ್ದು, ಸಂಘದ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಸಹಕಾರ ಸಂಘದ ಅನ್ವಯ ಸಹಕಾರ ಇಲಾಖೆ ಉಪನಿಬಂಧಕರಿಗೆ ದೂರು ನೀಡಿದ್ದು, ಅವರ ಆದೇಶ ಅನುಸಾರ ಹಣ ದುರುಪಯೋಗ ಪಡಿಸಿದ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಸಂಘದ ಅಭಿವೃದ್ಧಿಗೆ ಇದೇ ವಿಷಯ ಆಗಾಗ್ಗೆ ಚರ್ಚಿಸಿದರೆ ಕುಂದು ಉಂಟಾಗಲಿದೆ ಎಂದು ನಿರ್ದೇಶಕ ಎಂ.ಎನ್.ಕೊಮರಪ್ಪ ಹೇಳಿದ್ದು, ಸದಸ್ಯರನ್ನು ಕೆರಳಿಸಿತು.
ಅಧ್ಯಕ್ಷ ದಾಸಂಡ ರಮೇಶ್ ಅವರು, ಸಂಘ ರೂ.41 ಲಕ್ಷ ಲಾಭದಲ್ಲಿದೆ. ಇನ್ನಷ್ಟು ಅಭಿವೃದ್ಧಿ ಪಡಿಸಲು ಸಂಘದ ಸದಸಯರುಗಳ ಸಲಹೆ ಸಹಕಾರ ಬೇಕು ಎಂದು ಹೇಳಿದರು.
ದೀರ್ಘ ಕಾಲದ ರಜೆಯಲ್ಲಿರುವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಸದಸ್ಯರುಗಳು ಆಗ್ರಹಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಜಿ.ಜಿ.ಕೋಮಲ, ನಿರ್ದೇಶಕರುಗಳಾದ ಎಂ.ಎನ್.ಕೊಮರಪ್ಪ, ಎನ್.ಸಿ.ಪೊನ್ನಪ್ಪ, ಕೆ.ಎಸ್.ಮಂಜುನಾಥ್, ಲೀಲಾವತಿ, ಜೆರ್ಮಿ ಡಿಸೋಜ, ಡಿ.ಕೆ.ಗಂಗಾಧರ,ಡಾ.ಶಶಿಕಾಂತ್ ರೈ, ಕೆ.ಪಿ.ಜಗನ್ನಾಥ್, ಪಿ.ಸಿ.ಮೋಹನ, ಆರ್.ಟಿ.ಲಾಂಛನ, ಪ್ರಭಾರ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚೈತ್ರ ಇದ್ದರು.

error: Content is protected !!