ಜಲಾಕಾಳಪ್ಪರಿಗೆ ಕೊಡಗಿನ ಗೌರಮ್ಮ ದತ್ತಿ ಪುರಸ್ಕಾರ : ಸಾಹಿತ್ಯ ಕ್ಷೇತ್ರಕ್ಕೆ ಗೌರಮ್ಮ ಅವರ ಕೊಡುಗೆ ಅಪಾರ : ವೀಣಾಅಚ್ಚಯ್ಯ ಶ್ಲಾಘನೆ

December 24, 2020

ಮಡಿಕೇರಿ ಡಿ.24 : ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೊಡಗಿನ ಗೌರಮ್ಮ ಅವರ ಕೊಡುಗೆ ಅಪಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಶ್ಲಾಘಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಘಟಕದ ವತಿಯಿಂದ ಪ್ರಸಕ್ತ ಸಾಲಿನ ಕೊಡಗಿನ ಗೌರಮ್ಮ ದತ್ತಿ ಪುರಸ್ಕಾರವನ್ನು ನಗರದ ಬಾಲಭವನದಲ್ಲಿ ಸಾಹಿತಿ ಜಲಾ ಕಾಳಪ್ಪ ವರಿಗೆ ನೀಡಿ ಗೌರವಿಸಲಾಯಿತು.
ದತ್ತಿ ಪುರಸ್ಕಾರ, ಪುಸ್ತಕ ಬಿಡುಗಡೆ ಹಾಗೂ ಕನ್ನಡ ಜಾಗೃತಿ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ವೀಣಾಅಚ್ಚಯ್ಯ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೊಡಗಿನ ಗೌರಮ್ಮ ಅವರ ಕೊಡುಗೆ ಅಪಾರವಾಗಿದ್ದು, ಅವರು ರಚಿಸಿದ ಕಥೆ, ಕಾದಂಬರಿ ಸಮಾಜ ಮುಖಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಮತ್ತಷ್ಟು ತೊಡಗಿಸಿಕೊಳ್ಳಬೇಕು. ಜೊತೆಗೆ ಕನ್ನಡ ಭಾಷೆ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕೊಡಗಿನ ಗೌರಮ್ಮ ದತ್ತಿ ಪುರಸ್ಕಾರ ಪಡೆದು ಮಾತನಾಡಿದ ಜಲಾಕಾಳಪ್ಪ ಅವರು ಕೊಡಗಿನ ಗೌರಮ್ಮ ಎಲ್ಲಾ ಜನರ ಮನೆ ಮಾತಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಮನೆಯಲ್ಲಿದ್ದ ಬಂಗಾರವನ್ನೇ ನೀಡಿದ್ದಾರೆ. ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊಡಗಿನ ಗೌರಮ್ಮ ಅವರು ಸ್ವಾತಂತ್ರ್ಯಕ್ಕಾಗಿ ಬದುಕನ್ನೇ ಅರ್ಪಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಗೌರಮ್ಮ ಅವರ ಸೇವೆ ಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಅನಂತಶಯನ ಅವರು ಮಾತನಾಡಿ ಜೀವನ ಮತ್ತು ಭಾವನೆಗಳು ಬರಹದ ಕವಿ ಹೃದಯದಲ್ಲಿ ಹರಡಿಕೊಂಡಿದೆ. ಆದ್ದರಿಂದ ಪುಸ್ತಕಗಳನ್ನು ಹೆಚ್ಚು ಬರೆಯಬೇಕು ಎಂದರು.
ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತಷ್ಟು ಪುಸ್ತಕಗಳು ಹೊರತರಬೇಕು. ಕಥೆ, ಕಾದಂಬರಿಗಳನ್ನು ಪ್ರತ್ಯೇಕವಾಗಿ ಆಹ್ವಾನಿಸಬೇಕು ಎಂದು ಅವರು ಸಲಹೆ ಮಾಡಿದರು.
ಕನ್ನಡ ಜಾಗೃತಿ ಸಮಿತಿ ನೂತನ ಸದಸ್ಯರಾದ ಎಸ್.ಮಹೇಶ್, ಭಾರತೀ ರಮೇಶ್, ರಜಿತಾ ಕಾರ್ಯಪ್ಪ ಮತ್ತು ಈ.ರಾಜು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಾಹಿತಿ ಸಂಗೀತ ರವಿರಾಜ್ ಅವರ ‘ನಿರುತ್ತರ’ ಕವನ ಸಂಕಲನ ಹಾಗೂ ಕೃಪಾ ದೇವರಾಜು ಅವರ ‘ಭಾವದ ಕದತಟಿ’್ಟ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಮಕ್ಕಳ ಸಣ್ಣ ಕಥೆಗಳ ಗೌರಮ್ಮ ದತ್ತಿ ಸ್ಪರ್ಧೆಯ ವಿಜೇತರಾದ ಎಚ್.ಧನಲಕ್ಷ್ಮಿ(ಪ್ರಥಮ), ವಿ.ಕೆ.ರಮ್ಯ(ದ್ವಿತೀಯ), ಎಚ್.ವಿ.ಸೋನ(ತೃತೀಯ), ಸಿ.ಪಿ.ಪ್ರೀತಮ್(ಸಮಾದಾನಕರ) ಇವರಿಗೆ ಬಹುಮಾನ ನೀಡಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷರಾದ ಕುಡೆಕಲ್ ಸಂತೋಷ್, ಎಸ್.ಜಿ.ಜವರಪ್ಪ, ಪ್ರಾಧ್ಯಾಪಕರಾದ ಕೋರನ ಸರಸ್ವತಿ, ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಕಸ್ತೂರಿ ಗೋವಿಂದಮ್ಮಯ್ಯ, ಅಶೋಕ್ ಕೃಷ್ಣ, ಕವಿತಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ ಮತ್ತಿತರರು ಹಾಜರಿದ್ದರು.
ಗೌರಮ್ಮ ಪ್ರಶಸ್ತಿ ಪಡೆದಿರುವ ಸ್ಮಿತಾ ಅಮೃತಾ ರಾಜ್, ಸಂಗೀತ ರವಿರಾಜ್, ಮಿಲನ ಭರತ್, ಕಾವೇರಿ ಪ್ರಕಾಶ್, ಸುನಿತಾ ಇತರರು ಇದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಂ.ಡಿ.ರಂಗಸ್ವಾಮಿ ಸ್ವಾಗತಿಸಿದರು. ಉಷಾರಾಣಿ ಅವರು ನಿರೂಪಿಸಿದರು. ನಾಗರಾಜ ಶೆಟ್ಟಿ ಅವರು ವಂದಿಸಿದರು.

error: Content is protected !!