ಕೂಡಿಗೆ ಕ್ರೀಡಾ ಶಾಲೆ : ಡಿ.28 ಮತ್ತು 29 ರಂದು ಕ್ರೀಡಾಪಟುಗಳ ಆಯ್ಕೆ

24/12/2020

ಮಡಿಕೇರಿ ಡಿ.24 : ಯುವ ಸಬಲೀಕರಣ ಮತ್ತ್ತು ಕ್ರೀಡಾ ಇಲಾಖೆ ವತಿಯಿಂದ 2021-22 ನೇ ಸಾಲಿಗೆ ನಡೆಸುತ್ತಿರುವ ರಾಜ್ಯ ವಲಯದ ಕ್ರೀಡಾ ಶಾಲೆ, ಕ್ರೀಡಾ ನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಡಿಸೆಂಬರ್ 28 ಮತ್ತು 29 ರಂದು ಕುಶಾಲನಗರ ಬಳಿಯ ಕೂಡಿಗೆ ಸರ್ಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ತಿಳಿಸಿದ್ದಾರೆ.
ಷರತ್ತುಗಳು: ಕ್ರೀಡಾ ಶಾಲೆ/ ಕ್ರೀಡಾ ನಿಲಯಗಳ ಆಯ್ಕೆಯಲ್ಲಿ ಭಾಗವಹಿಸುವವರು 7 ನೇ ತರಗತಿಯಲ್ಲಿ ಓದುತ್ತಿರುವ ದೃಢೀಕರಣ ಪತ್ರ, ಜನ್ಮ ದಿನಾಂಕ ದೃಢೀಕರಣ ಪತ್ರಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ ಕಡ್ಡಾಯವಾಗಿ ತರತಕ್ಕದ್ದು, ದೈಹಿಕ ಸಾಮಥ್ರ್ಯದ ಬಗ್ಗೆ ಸರ್ಕಾರಿ ವೈದ್ಯರಿಂದ ವೈದ್ಯಕೀಯ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು, ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಇಲಾಖೆ ವತಿಯಿಂದ ಯಾವುದೇ ಭತ್ಯೆ ನೀಡುವುದಿಲ್ಲ.
8 ನೇ ತರಗತಿ ಕ್ರೀಡಾ ಶಾಲೆ, ವಸತಿ ನೀಲಯಗಳ ಪ್ರವೇಶಕ್ಕೆ ಜಿಲ್ಲಾ, ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ ಆಯ್ಕೆ ಪ್ರಕ್ರೀಯೆಯಲ್ಲಿ ಭಾಗವಹಿಸುವುದು ಕಡ್ಡಾಯ. ಪ್ರಥಮ ಪಿಯುಸಿ ಗೆ ಆಯ್ಕೆ ನೀಡುವ ಅಭ್ಯರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರೆ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರೀಯೆಯಲ್ಲಿ ಪ್ರಶಸ್ತಿ ಪತ್ರಗಳನ್ನು ಕಡ್ಡಾಯವಾಗಿ ಹಾಜರುಪಡಿಸುವುದು. ಕ್ರೀಡಾ ಶಾಲೆ/ ನಿಲಯಗಳಿಗೆ ಆಯ್ಕೆಯಾದವರಿಗೆ ವಿದ್ಯಾಭ್ಯಾಸ, ಊಟೋಪಚಾರ, ವಸತಿ ಮತ್ತು ಕ್ರೀಡಾ ಕಿಟ್ಟನ್ನು ಇಲಾಖೆ ವತಿಯಿಂದ ಉಚಿತವಾಗಿ ಒದಗಿಸಲಾಗುವುದು. ಕ್ರೀಡಾ ಸಮವಸ್ತ್ರದೊಂದಿಗೆ ಬರಬೇಕು.
ಆಯ್ಕೆ ಪ್ರಕ್ರೀಯೆ ನಡೆಯುವ ಸ್ಥಳದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ದರಿಸಬೇಕು. ಕ್ರೀಡಾಪಟುಗಳು ಕಡ್ಡಾಯವಾಗಿ ಕೋವಿಡ್-19 ಟೆಸ್ಟ್ ಮಾಡಿಸಿದ ವರದಿಯನ್ನು ತಪ್ಪದೇ ಹಾಜರು ಪಡಿಸುವುದು. ವರದಿಯು ನೆಗಿಟಿವ್ ಬಂದಲ್ಲಿ ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪೋಷಕರು ಕ್ರೀಡಾಪಟುಗಳೊಂದಿಗೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.