ಬಿಎಸ್‍ವೈ ರಾಜೀನಾಮೆಗೆ ಸಿದ್ದು ಒತ್ತಾಯ

25/12/2020

ಬೆಂಗಳೂರು ಡಿ.25 : ಡಿ ನೋಟಿಫಿಕೇಶನ್ ತನಿಖೆಗೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಕೋರ್ಟ್ ನಿಗಾದಲ್ಲಿ ತನಿಖೆ ನಡೆಯಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವುದರಿಂದ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ನಿಷ್ಪಕ್ಷಪಾತ ತನಿಖೆ ಆಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆರೋಪದಿಂದ ಮುಕ್ತರಾಗಿ ಬಂದ್ರೆ ಮತ್ತೆ ಅಧಿಕಾರ ವಹಿಸಿಕೊಳ್ಳಲು ನಮ್ಮ ತಕರಾರಿಲ್ಲ ಎಂದರು.
ಯಡಿಯೂರಪ್ಪ ಅವರಿಗೆ ಕಾನೂನಿನ ಬಗ್ಗೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಒಂದು ಸೆಕೆಂಡ್ ಕೂಡ ಸಿಎಂ ಆಗಿ ಇರಬಾರದು. ಬಂಡತನದಿಂದ ರಾಜೀನಾಮೆ ನೀಡದಿದ್ದರೆ ಅವರ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳಬೇಕು. ಚೌಕೀದಾರ್ ಮೋದಿ ಯಡಿಯೂರಪ್ಪ ಮೇಲೆ ಕ್ರಮ ಜರುಗಿಸಬೇಕು. ಇದು ಸೀರಿಯಸ್ ಕೇಸ್, ಕೂಡಲೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.