ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಚವ್ವಂಡ ಯಶಸ್ವಿ ತಮ್ಮಯ್ಯ

December 25, 2020

ಮಡಿಕೇರಿ ಡಿ.25 : ದೆಹಲಿಯಲ್ಲಿ 2021 ಜನವರಿ 26ರ ಗಣರಾಜ್ಯೋತ್ಸವ ದಿನದಂದು ನಡೆಯುವ ಸಶಸ್ತ್ರ ಪಡೆಗಳ ಪೆರೇಡ್ ನಲ್ಲಿ ಪಾಲ್ಗೊಳ್ಳಲು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜ್ ನ ಎನ್.ಸಿ.ಸಿ ಕೆಡೆಟ್(ಸೀನಿಯರ್ ವಿಂಗ್) ಕು.ಚವ್ವಂಡ ಯಶಸ್ವಿ ತಮ್ಮಯ್ಯ ಅವರು ಆಯ್ಕೆಯಾಗಿದ್ದಾರೆ.
ಮೂಲತಃ ಪಾರಾಣೆ ಕೊಣಂಜಗೇರಿ ನಿವಾಸಿಯಾಗಿರುವ ಚವ್ವಂಡ ಮನು ತಮ್ಮಯ್ಯ ಹಾಗೂ ಸಮಿತಾ ದಂಪತಿಗಳ ಪುತ್ರಿಯಾಗಿರುವ ಯಶಸ್ವಿ, ಎಫ್‍ಎಂಸಿ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಪೂರೈಸಿದ ಯಶಸ್ವಿ, ಶಾಲೆಯ ಹಾಕಿ ತಂಡದ ನಾಯಕಿಯಾಗಿ 2016-17ರಲ್ಲಿ ಐಸಿಎಸ್‍ಸಿ ಶಿಕ್ಷಣ ಸಂಸ್ಥೆಗಳ ನಡುವೆ ನಡೆದ ಅಂತರ್ ಶಾಲಾ ಹಾಕಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ರನ್ನರ್ಸ್ ಪ್ರಶಸ್ತಿಗೂ ಭಾಜನರಾಗಿದ್ದರು.
ದ್ವಿತೀಯ ಪಿಯುಸಿಯನ್ನು ನಗರದ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದ ಯಶಸ್ವಿ, ಪ್ರಸ್ತುತ ಕಾರ್ಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

error: Content is protected !!