21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿಗೆ ಒಲಿದ ಮೇಯರ್ ಪಟ್ಟ !

December 25, 2020

ಮಡಿಕೇರಿ ಡಿ.25 : ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಆಗಿ 21 ವರ್ಷ ದ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ಆಯ್ಕೆಯಾಗಿದ್ದಾರೆ. ಈ ಕುರಿತು ಆರ್ಯ ಪ್ರತಿನಿಧಿಸುತ್ತಿರುವ ಸಿಪಿಐ(ಎಂ) ಪಕ್ಷ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ. ಇದರಿಂದಾಗಿ ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಆರ್ಯ ರಾಜೇಂದ್ರನ್ ಪಾತ್ರರಾಗಲಿದ್ದಾರೆ.
ಕೇರಳದಲ್ಲಿ ಇತ್ತೀಚಿಗೆ ಏಕಕಾಲಕ್ಕೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಿರುವನಂತಪುರಂ ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿರುವ ‘ಮುಡವನ್ ಮುಗಳ್’ ಕ್ಷೇತ್ರದಿಂದ ಎಲ್.ಡಿ. ಎಫ್. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್ಯ ರಾಜೇಂದ್ರನ್ ಪ್ರಚಂಡ ಬಹುಮತದಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು.
ಇದೀಗ ಬಿಎಸ್ಸಿ (ಗಣಿತ) ವಿದ್ಯಾರ್ಥಿನಿಯಾಗಿರುವ ಆರ್ಯ ರಾಜೇಂದ್ರನ್ ತಿರುವನಂತಪುರಂ ಮಹಾನಗರಪಾಲಿಕೆಯ ಪ್ರತಿಷ್ಠಿತ ‘ಮೇಯರ್’ ಪಟ್ಟಕ್ಕೇರುವುದು ಖಚಿತವಾಗಿದೆ. ಮೇಯರ್ ಆದರೂ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವುದಾಗಿ ಆರ್ಯ ರಾಜೇಂದ್ರನ್ ಹೇಳಿಕೊಂಡಿದ್ದಾರೆ. ಎಸ್.ಎಫ್.ಐ. ರಾಜ್ಯ ಸಮಿತಿ ಸದಸ್ಯರೂ ಆಗಿರುವ ಆರ್ಯ ರಾಜೇಂದ್ರನ್, ಸಾಮಾನ್ಯ ಎಲೆಕ್ಟ್ರಿಷಿಯನೊಬ್ಬರ ಪುತ್ರಿಯಾಗಿದ್ದಾರೆ.

error: Content is protected !!