ಮೈಸೂರಿನಲ್ಲಿ ಕಲಾಕೃತಿ ಹೊಂದಿದ್ದ ಆನೆ ದಂತಗಳ ಮಾರಾಟಕ್ಕೆ ಯತ್ನ : ಕೊಡಗಿನ ಈರ್ವರು ಸೇರಿ ಮೂವರ ಬಂಧನ

26/12/2020

ಮಡಿಕೇರಿ ಡಿ. 26 : ಶಿಲ್ಪಕಲೆಯಂತೆ ಕೆತ್ತನೆ ಹೊಂದಿರುವ ಮೂರು ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಧಾಳಿ ನಡೆಸಿ, ಕೊಡಗಿನ ಸೋಮವಾರಪೇಟೆಯ ಈರ್ವರು ಸೇರಿದಂತೆ ಮೈಸೂರಿನ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಆಲೇಕಟ್ಟೆ ರಸ್ತೆ ನಿವಾಸಿ ಮುರುಳಿ(ಶಿವದಾಸ್-55) ಹಾಗೂ ವೆಂಕಟೇಶ್ವರ ಬ್ಲಾಕ್‍ನ ಸುಮಂತ್ (26) ಸೇರಿದಂತೆ ಮೈಸೂರು ನಾಯ್ಡು ನಗರದ ಮನೋಹರ್ (40) ಎಂಬವರನ್ನು ಬಂಧಿಸಲಾಗಿದೆ.
ವೈವಿಧ್ಯ ಕೆತ್ತನೆಗಳನ್ನು ಹೊಂದಿದ್ದ ಮೂರು ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ದೊರೆತ ಖಚಿತ ಸುಳಿವಿನ ಮೇರೆ ಮೈಸೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಧಾಳಿ ನಡೆಸಿದ್ದು, ಆನೆ ದಂತಗಳು, ವಾಹನ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ನಾಯ್ಡು ನಗರದ ಬಳಿ ಆರೋಪಿಯನ್ನು ತಡೆದು ಪರಿಶೀಲಿಸಿದ ಸಂದರ್ಭ ಕೆ.ಎ.02-ಎಂಬಿ 0577 ಆಲ್ಟೋ ಕಾರಿನಲ್ಲಿ ಕೆತ್ತನೆ ಮಾಡಿರುವ ಮೂರು ಆನೆ ದಂತಗಳು ಪತ್ತೆಯಾಗಿದೆ.
ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ. ಪೂವಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್‍ಎಫ್‍ಓ ವಿವೇಕ್, ಡಿಆರ್‍ಎಫ್‍ಓ ಸುಂದರ್, ಪ್ರಮೋದ್, ಲಕ್ಷ್ಮೀಶ್, ಸ್ನೇಹ, ಮೇಘನ, ನಾಗರಾಜ್, ಸಿಬ್ಬಂದಿಗಳಾದ ಚೆನ್ನಬಸಪ್ಪ, ಮಹಾಂತೇಶ್, ಶರಣಪ್ಪ, ಗೋವಿಂದು, ವಿರೂಪಾಕ್ಷ, ರವಿಕುಮಾರ್, ರವಿನಂದನ್, ಚಾಲಕರು ಪುಟ್ಟಸ್ವಾಮಿ ಮತ್ತು ಮಧು ಪಾಲ್ಗೊಂಡಿದ್ದರು.