ಬ್ಯಾಂಕುಗಳಲ್ಲಿ ಕನ್ನಡ ಬಳಕೆಗೆ ಕನ್ನಡ ಜಾಗೃತಿ ಸಮಿತಿ ಆಗ್ರಹ : ಡಿ. 29 ರಂದು ಮಡಿಕೇರಿಯಲ್ಲಿ ಜಾಗೃತಿ ಅಭಿಯಾನ

December 26, 2020

ಮಡಿಕೇರಿ ಡಿ. 26 : ಬ್ಯಾಂಕುಗಳಲ್ಲಿ ಕನ್ನಡ ಬಳಕೆಗೆ ಒತ್ತಾಯಿಸಿ ಡಿ. 29 ರಂದು ಜಿಲ್ಲಾ ಲೀಡ್ ಬ್ಯಾಂಕ್ ಮುಂಭಾಗದಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್ ಹಾಗೂ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ 2020-2021ನ್ನು ಕನ್ನಡ ಕಾಯಕ ವರ್ಷಾಚರಣೆ ಹೆಸರಿನಲ್ಲಿ ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಿದ್ದು, ಅದಕ್ಕೆ ಪೂರಕವಾಗಿ ಡಿ. 29 ರಂದು ವಿಶ್ವಮಾನವತೆ ಸಾರಿದ ಕುವೆಂಪು ಅವರ ಜನ್ಮದಿನದ ನಿಮಿತ್ತ ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ಜಿಲ್ಲಾ ಲೀಡ್ ಬ್ಯಾಂಕ್ ಮುಂಭಾಗದಲ್ಲಿ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕುರಿತು ಜಾಗೃತಿ ಅಭಿಯಾನ ನಡೆಯಲಿದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಕನ್ನಡ ಬಳಕೆ ಹಕ್ಕೊತ್ತಾಯ ಪತ್ರ ವನ್ನು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ನಂತರ ಬ್ಯಾಂಕಿನ ಮುಂಭಾಗದಲ್ಲಿ ಘೋಷವಾಕ್ಯಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯ ನಡೆಯಲಿದೆ ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಲೇಖಕರು ಹಾಗೂ ಕಲಾವಿದರ ಬಳಗ, ಜಿಲ್ಲೆಯ ಎಲ್ಲಾ ಕನ್ನಡ ಪರ ಸಂಘಟನೆಗಳು, ಕನ್ನಡ ಪರ ಚಿಂತಕರು, ಅಭಿಮಾನಿಗಳು ಈ ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿ ಸದಸ್ಯರಾದ ಎಸ್.ಮಹೇಶ್ , ಭಾರತಿ ರಮೇಶ್, ಕಾಜೂರು ಸತೀಶ್, ಶ್ರೀಮತಿ ರಂಜಿತಾ ಕಾರ್ಯಪ್ಪ, ಈ.ರಾಜು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

error: Content is protected !!