ಪ್ರಕೃತಿಯ ಮಡಿಲಲ್ಲಿರುವ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್

26/12/2020

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳತಾಲೂಕಿನ ಕರೋಪಾಡಿ ಗ್ರಾಮದಲ್ಲಿದೆ. ಪ್ರಕೃತಿಯ ಮಡಿಲಲ್ಲಿರುವ ಈ ಕ್ಷೇತ್ರದಲ್ಲಿ ಆಂಜನೇಯ, ದತ್ತಾತ್ರೇಯ, ಗುಹಾಂತರ್ಗತ ಪಂಚಮುಖೀ ಆಂಜನೇಯ ಮಂದಿರಗಳಿವೆ.ಶ್ರೀ ದತ್ತಾಂಜನೇಯ ಇಲ್ಲಿನ ಆರಾಧ್ಯಮೂರ್ತಿ, ಶ್ರೀ ವಜ್ರಮಾತಾದೇವಿಯೂ ಇಲ್ಲಿನ ಆರಾಧ್ಯದೇವರು. ದತ್ತಾತ್ರೇಯನೆಂದರೆ ಬ್ರಹ್ಮ-ವಿಷ್ಣು-ಶಿವ ಸ್ವರೂಪಿ.ಒಳ್ಳೆಯ ಚಿಂತನೆಗಳನ್ನು ಸೃಷ್ಟಿಸಿ, ದೈವಿಕ-ಮಾನವೀಯ ಗುಣಗಳನ್ನು ಸ್ಥಿರಗೊಳಿಸಿ, ಅರಿಷಡ್ವರ್ಗಗಳನ್ನು ನಾಶಗೊಳಿಸುವ ದೇವರೆಂದು ನಂಬಿಕೆ. ಆಂಜನೇಯನು ಶಕ್ತಿಯ ಖಣಿ. ದಿನಾಂಕ ೧೫-೦೨-೧೯೮೯ ರಂದು ನಾರಾಯಣಸ್ವಾಮಿ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಓಂ ಶ್ರೀ ವೀರಾಂಜನೇಯಸ್ವಾಮೀ ಕ್ಷೇತ್ರವೇ ಮುಂದೆ ಶ್ರೀ ಗುರುದೇವದತ್ತ ಸಂಸ್ಥಾನವಾಯಿತು. ನಾರಾಯಣಸ್ವಾಮಿಯವರೇ ಮುಂದೆ ಶ್ರೀ ಗುರುದೇವಾನಂದರಾದರು. ಈ ಅವಧೂತರೇ ಇಲ್ಲಿನ ಕರ್ತೃತ್ವ ಶಕ್ತಿ.

ಗರ್ಭಗುಡಿ
ಕೃಷ್ಣಶಿಲೆಯ ಗರ್ಭಗುಡಿಯ ಗೋಪುರವು ೩೫ ಅಡಿ ಎತ್ತರವಿದೆ.ವಿಶೇಷವಾದ ಪದ್ಮಪೀಠದಿಂದ ಗೋಪುರವು ಮೇಲೇರಿದೆ. ತಮಿಳುನಾಡಿನ ಶಿಲೆಗಳನ್ನು ಆಯ್ದು, ತಮಿಳುನಾಡಿನ ಕಾರೈಕುಡಿಯಲ್ಲಿ ಕೆತ್ತನೆಯನ್ನು ಮಾಡಲಾಗಿದೆ. ಗರ್ಭಗುಡಿಯು ಹೊಯ್ಸಳರ ವಾಸ್ತುಶಿಲ್ಪ ಶೈಲಿಯ ವೇಸರಶಿಲ್ಪ ಶೈಲಿಯಲ್ಲಿದೆ.ಆಕಾರದಲ್ಲಿ ಅಷ್ಟಪ್ರಾಸಾದವಾಗಿ ಕಂಗೊಳಿಸುತ್ತದೆ.ಖ್ಯಾತ ಸ್ಥಪತಿ ದಕ್ಷಿಣಾಮೂರ್ತಿಯವರುನಿರ್ಮಾಣದ ನೇತೃತ್ವ ವಹಿಸಿದವರು.(ಆಂಜನೇಯನ ವಿಗ್ರಹವೂ ಇವರ ಕೊಡುಗೆಯೇ.)

ರಾಜಗೋಪುರ
ದೇಗುಲದ ಗರ್ಭಗುಡಿಯ ಹೊರಗೆ ಅಷ್ಟಪಟ್ಟಿ ಆಕಾರದಲ್ಲಿ ಸುಂದರವಾದ ಸುತ್ತುಗೋಪುರವಿದೆ. ಇದರಲ್ಲಿ ಕಲಾತ್ಮಕವಾದ ಬೇರೆಬೇರೆ ವರ್ಣಚಿತ್ರಗಳ ಕಥಾಮಾಲಿಕೆಯಿದೆ. ೪೦ ಅಡಿ ಎತ್ತರದ ರಾಜಗೋಪುರದಲ್ಲಿ ಪುರಾಣೇತಿಹಾಸದ ಬೋಧನೆ ನೀಡುವ ಚಿತ್ರಕಾವ್ಯಗಳಿವೆ. ಗೋಪುರದ ಪೂರ್ವಭಾಗದಲ್ಲಿ ಹನುಮದ್ವಿಲಾಸದ ಕಥಾನಕ,ದಕ್ಷಿಣಭಾಗದಲ್ಲಿ ಶಿವಲೀಲೆಯ ಕಥೆಗಳು, ಪಶ್ಚಿಮದಲ್ಲಿ ಗುರುದತ್ತಾತ್ರೇಯರ ಮಹಿಮೆಯನ್ನು ಸಾರುವ ಕಲಾಕೃತಿಗಳು ಹಾಗೂ ಉತ್ತರದಲ್ಲಿ ಶ್ರೀಮನ್ನಾರಾಯಣನ ಮೂರ್ತಿಯಿದೆ.

ಆರಾಧ್ಯದೇವರುಗಳು, ಪರಿವಾರದೇವತೆಗಳು
ಶ್ರೀ ದತ್ತಾತ್ರೇಯ ಪ್ರಭು ಮತ್ತು ಶ್ರೀ ಆಂಜನೇಯ ಸ್ವಾಮಿ ಇಲ್ಲಿಯ ಆರಾಧ್ಯ ದೇವರುಗಳು.೧ ಅಡಿ ೧ ಇಂಚು ಎತ್ತರದ ದತ್ತಾತ್ರೇಯರ ಸ್ಫಟಿಕ ವಿಗ್ರಹ, ಕೃಷ್ಣಶಿಲೆಯಿಂದ ರೂಪುಗೊಂಡಂತಹ ೫ ಅಡಿ ೪ ಇಂಚು ಎತ್ತರದ ಅಭಯ ಹಸ್ತದ ಆಂಜನೇಯ ಸ್ವಾಮಿಯ ವಿಗ್ರಹ ಗರ್ಭಗುಡಿಯೊಳಗಿದೆ. ಪರಿವಾರ ದೇವತೆಗಳಾಗಿ ವಿಘ್ನನಾಶಕ ಬಲಮುರಿಗಣಪತಿ, ಶ್ರೀ ಮಹಾವಜ್ರಮಾತೆ ಪ್ರಸನ್ನರೂಪಿಯಾಗಿ ಪರ್ವಕಾಲಗಳಲ್ಲಿ ಸೇವೆ ಸ್ವೀಕರಿಸುವ ಜಗದ್ಧಾತ್ರಿ, ಸುಬ್ರಹ್ಮಣ್ಯ ಸ್ವಾಮಿ, ಮೂಲರಾಮ, ಶಕ್ತಿ ಸ್ವರೂಪಿಣಿ ಭದ್ರಕಾಳಿ ಆರಾಧಿಸಲ್ಪಡುತ್ತಿದ್ದಾರೆ. ನೈಋತ್ಯಭಾಗದಲ್ಲಿ ನಾಗನ ಬಿಂಬವನ್ನು ಪ್ರತಿಷ್ಠಾಪಿಸಲಾಗಿದೆ. ನಮಸ್ಕಾರ ಮಂಟಪದ ಹೊರಗೆ ಸುತ್ತು ಗೋಪುರದ ಮಧ್ಯೆ ಔದುಂಬರ (ಅತ್ತಿ), ಆಮಲಕ (ನೆಲ್ಲಿ), ಹಾಗೂ ಪಾರಿಜಾತ ವೃಕ್ಷಗಳು ಪ್ರಾಕೃತಿಕವಾಗಿ ಹುಟ್ಟಿಬೆಳೆದಿವೆ. ಅತ್ತಿಮರದಲ್ಲಿ ಲಕ್ಷೀನಾರಾಯಣ, (ಇಲ್ಲಿ ದತ್ತನ ಸಾನಿಧ್ಯ), ಪಾರಿಜಾತದಲ್ಲಿ ಪ್ರಾಣದೇವರು, ನೆಲ್ಲಿಮರ ವಿಷ್ಣು ಸಾನಿಧ್ಯದ ಪ್ರತೀಕವಾಗಿರುತ್ತದೆ. ತ್ರೇತಾಯುಗದಲ್ಲಿ ಆಂಜನೇಯನು ಸಂಜೀವಿನಿಯನ್ನು ಹುಡುಕಲು ಹೋಗಿ ಚಂದ್ರದ್ರೋಣ ಪರ್ವತವನ್ನು ತರುತ್ತಿರುವಾಗ ಇಲ್ಲಿದ್ದ ಮಾಯಾಶಕ್ತಿಗಳು ಪ್ರಾಣದೇವರಿಗೆ ತಡೆಯೊಡ್ಡಿದಾಗ ಆ ಶಕ್ತಿಗಳನ್ನು ಪ್ರಾಣದೇವರು ನಾಶಪಡಿಸಿ, ಈ ಪ್ರದೇಶವನ್ನು ಸತ್ವಭರಿತವಾಗಿಸಿದನು ಎಂಬ ನಂಬಿಕೆಯಿದೆ. ಹನುಮಗಂಗಾ ಪುಷ್ಕರಿಣಿಯನ್ನು ೨೦೧೯ ರಲ್ಲಿ ನಿರ್ಮಿಸಲಾಗಿದೆ.