ಹೊಸ್ಕೇರಿ ಆಸ್ತಿ ಕಲಹ : ಸೊಸೆ ಆರೋಪಗಳನ್ನು ತಳ್ಳಿ ಹಾಕಿದ ಅತ್ತೆ, ಮಾವ

December 26, 2020

ಮಡಿಕೇರಿ ಡಿ.26 : ಹೊಸ್ಕೇರಿ ಗ್ರಾಮದಲ್ಲಿರುವ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಸೊಸೆ ಮಂಡೀರ ವಿಮಾಹರೀಶ್ ಅವರು ಬಿ.ವೈ.ರವೀಂದ್ರ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಮಾಡಿರುವ ಆರೋಪ ನಿರಾಧಾರವೆಂದು ವಿಮಾ ಅವರ ಮಾವ ಎಂ.ಎಸ್.ವಾಸಯ್ಯ ಹಾಗೂ ಅತ್ತೆ ಸಾವಿತ್ರಿ ವಾಸಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೊಸೆ ನೀಡುತ್ತಿರುವ ಕಿರುಕುಳದಿಂದ ಬೇಸತ್ತು ವಯಸ್ಸಾದ ನಾವುಗಳು ಕಳೆದ 12 ವರ್ಷಗಳಿಂದ ಮೂರ್ನಾಡಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದೇವೆ ಎಂದು ಕಣ್ಣೀರು ಹಾಕಿದರು.
ನ್ಯಾಯಾಲಯದ ಆದೇಶದಂತೆ ಪಿತ್ರಾರ್ಜಿತ ಆಸ್ತಿ 10 ಎಕರೆ ತೋಟ ಮತ್ತು ಮನೆಯನ್ನು ಪುತ್ರ ಹರೀಶ್ ಗೆ ನೀಡಲಾಗಿದ್ದು, ನನ್ನ ಸ್ವಯಾರ್ಜಿತ ಐದೂವರೆ ಎಕರೆ ತೋಟವನ್ನು ನನಗೆ ಮತ್ತು ಹೆಣ್ಣು ಮಕ್ಕಳಿಗಾಗಿ ಇಟ್ಟುಕೊಂಡಿದ್ದೇನೆ. ಕಾಫಿ ಮತ್ತು ಕಾಳುಮೆಣಸು ಫಸಲು ಬಂದಿರುವ ಈ ಸಂದರ್ಭದಲ್ಲಿ ದುರುದ್ದೇಶದಿಂದ ನಮಗೆ ಸೇರಿದ ತೋಟವನ್ನು ಸ್ವಾಧೀನಕ್ಕೆ ಪಡೆಯಲು ವಿಮಾ ಪ್ರಯತ್ನ ನಡೆಸಿದ್ದು, ನಾವು ನಿಯೋಜಿಸಿದ ಕಾರ್ಮಿಕರುಗಳನ್ನು ತೋಟದಿಂದ ಹೊರ ಹಾಕಿದ್ದಾರೆ. ಅಲ್ಲದೆ ತೋಟವನ್ನು ನಿರ್ವಹಿಸುತ್ತಿರುವ ಬಿ.ವೈ.ರವೀಂದ್ರ ಹಾಗೂ ನ್ಯಾಯ ಒದಗಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ವಾಸಯ್ಯ ಆರೋಪಿಸಿದರು.
ವಯಸ್ಸಾದ ನಾವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ನಮ್ಮ ತೋಟವನ್ನು ನಿರ್ವಹಿಸಲು ಬಿ.ವೈ.ರವೀಂದ್ರ ಅವರನ್ನು ನೇಮಿಸಿಕೊಂಡಿದ್ದೇವೆ. ತೋಟದ ಕೆಲಸಕ್ಕಾಗಿ ಎರಡು ಲೈನ್ ಮನೆಗಳಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಕಾರ್ಮಿಕರು ಕೂಡ ವಾಸವಾಗಿದ್ದರು. ಆದರೆ ನ್ಯಾಯಾಲಯದ ಆದೇಶವಾಗಿ ಒಂದು ವರ್ಷ ಸುಮ್ಮನಿದ್ದ ಹರೀಶ ಹಾಗೂ ವಿಮಾ ಹರೀಶ ಫಸಲಿನ ಮೇಲಿನ ಆಸೆಯಿಂದ ತೊಂದರೆ ನೀಡುತ್ತಿದ್ದಾರೆ. ಸುಳ್ಳು ಆರೋಪಗಳ ಮೂಲಕ ನಮ್ಮನ್ನು ತೇಜೋವಧೆ ಮಾಡುವ ಪ್ರಯತ್ನವನ್ನು ವಿಮಾ ಮಾಡಿದ್ದು, ನನ್ನ ಸ್ವಾಧೀನದಲ್ಲಿರುವ ಐದೂವರೆ ಎಕರೆ ತೋಟದ ಮೇಲೆ ಹರೀಶ ಅವರಿಗೆ ಯಾವುದೇ ಹಕ್ಕಿಲ್ಲವೆಂದು ವೃದ್ಧ ದಂಪತಿಗಳು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪ್ರಮುಖ ತೆನ್ನಿರಾ ಮೈನಾ ಮಾತನಾಡಿ ಯಾವುದೇ ವಯೋವೃದ್ಧರಿಗೆ ಈ ರೀತಿಯ ಸ್ಥಿತಿ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದರು. ವಯಸ್ಸಾದ ದಂಪತಿಗಳು ಅಸಹಾಯಕತೆ ಮತ್ತು ಆತಂಕವನ್ನು ವ್ಯಕ್ತಪಡಿಸಿರುವ ಕಾರಣ ಅವರ ಬೆಂಬಲಕ್ಕೆ ನಿಂತಿರುವುದಾಗಿ ಸ್ಪಷ್ಟಪಡಿಸಿದರು. ಅತ್ತೆ, ಮಾವನ ಬಳಿ ಇರುವ ಐದೂವರೆ ಎಕರೆ ತೋಟದ ಮೇಲೆ ಸೊಸೆಯ ಕಣ್ಣು ಬಿದ್ದಿದೆ ಎಂದು ಆರೋಪಿಸಿದರು.

error: Content is protected !!