ಕಾವೇರಿ ತುಲಾಸಂಕ್ರಮಣಕ್ಕೆ ಭಕ್ತರನ್ನು ಬಿಡಲಿಲ್ಲ : ಈಗ ಸಾವಿರಾರು ಪ್ರವಾಸಿಗರನ್ನು ಯಾಕೆ ಬಿಟ್ಟಿದ್ದಾರೆ ?

26/12/2020

ಮಡಿಕೇರಿ ಡಿ.26 : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ಕಳೆದ ಎರಡು ದಿನಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿದ್ದಾರೆ.
ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಅಸಂಖ್ಯಾತ ಭಕ್ತರು ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥ ಪಡೆದು ಪುನೀತರಾದರು. ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ಶ್ರೀಭಗಂಡೇಶ್ವರ ದೇವಾಲಯಕ್ಕೂ ಭೇಟಿ ನೀಡಿದರು. ಸಾಲು ಸಾಲು ರಜೆಯ ಕಾರಣದಿಂದ ಸಾವಿರಾರರು ಪ್ರವಾಸಿಗರ ಆಗಮನವಾಗಿ ವಾಹನದಟ್ಟಣೆ ಉಂಟಾಯಿತ್ತಲ್ಲದೆ, ವಾಹನಗಳ ನಿಲುಗಡೆಗೂ ಅನಾನುಕೂಲ ಎದುರಾಯಿತು. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದೆ ನಿರ್ಲಕ್ಷ್ಯ ವಹಿಸಿದ ದೃಶ್ಯವೂ ಕಂಡು ಬಂತು.
ಪ್ರವಾಸಿಗರು ಹಾಗೂ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಪ್ರಸ್ತುತ ವರ್ಷ ಮಹಾಮಳೆಗೆ ಗಜಗಿರಿ ಬೆಟ್ಟ ಕುಸಿದ ಪ್ರದೇಶವನ್ನು ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿದರು. ಹಿಂದೆಂದೂ ಕಾಣದಷ್ಟು ಸಂಖ್ಯೆಯ ಪ್ರವಾಸಿಗರು ಈ ಬಾರಿ ಆಗಮಿಸಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
::: ಈಗ ಯಾಕೆ ನಿರ್ಬಂಧವಿಲ್ಲ :::
ದಕ್ಷಿಣ ಗಂಗೆ ಕಾವೇರಿಯನ್ನು ಕೊಡಗಿನ ಜನ ಕುಲದೇವಿ ಎಂದು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ವರ್ಷಕ್ಕೆ ಒಂದು ಬಾರಿ ಅಕ್ಟೋಬರ್ ತಿಂಗಳಿನಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಾಳೆ. ಅಂದು ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ತಲಕಾವೇರಿ ಕ್ಷೇತ್ರಕ್ಕೆ ಆಗಮಿಸಿದ ಮೂಲನಿವಾಸಿ ಭಕ್ತರನ್ನು ಜಿಲ್ಲಾಡಳಿತ ಕೋವಿಡ್ ಕಾರಣ ನೀಡಿ ತಡೆಯುವ ಯತ್ನ ಮಾಡಿತು. ಆದರೆ ಇಂದು ದೇಶದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಇವರನ್ನು ಯಾಕೆ ತಡೆಯುತ್ತಿಲ್ಲ, ಇವರಿಂದ ಕೋವಿಡ್ ಆತಂಕ ಎದುರಾಗುವುದಿಲ್ಲವೇ ? ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ತನ್ನ ಅನೂಕೂಲಕ್ಕೆ ತಕ್ಕಂದೆ ನಿರ್ಬಂಧಗಳನ್ನು ಸಡಿಲಿಸುತ್ತಿದ್ದು, ಮೂಲನಿವಾಸಿಗಳ ಧಾರ್ಮಿಕ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ.
ಪ್ರವಾಸಿಗರಿಂದ ಪುಣ್ಯಕ್ಷೇತ್ರ ತಲಕಾವೇರಿಯ ಪಾವಿತ್ರ್ಯತೆಗೆ ದಕ್ಕೆಯಾಗದಂತೆ ಎಚ್ಚರ ವಹಿಸಬೇಕೆಂದು ವಿವಿಧ ಸಂಘ, ಸಂಸ್ಥೆಗಳು ಕೂಡ ಜಿಲ್ಲಾಡಳಿತವನ್ನು ಒತ್ತಾಯಿಸಿವೆ.