ಕೊಡಗು : ಗ್ರಾ.ಪಂ ಎರಡನೇ ಹಂತದ ಚುನಾವಣೆ ಶಾಂತಿಯುತ

December 27, 2020

ಮಡಿಕೇರಿ ಡಿ.27 : ಗ್ರಾಮ ಪಂಚಾಯಿತಿಗಳಿಗೆ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆಯಿತು. ವಿರಾಜಪೇಟೆ ತಾಲ್ಲೂಕಿನ 136 ಕ್ಷೇತ್ರಗಳ 366 ಸ್ಥಾನಗಳಿಗೆ ನಡೆದ ಮತದಾನ ಶಾಂತಿಯುತವಾಗಿತ್ತು.
ಎಲ್ಲಾ ಮತಗಟ್ಟೆಗಳಲ್ಲಿ ವಯೋವೃದ್ಧರಾದಿಯಾಗಿ ಮಹಿಳೆಯರು ಹಾಗೂ ಪುರುಷರು ಉತ್ಸಾಹದಿಂದ ಮತದಾನ ಮಾಡಿದರು. ಕೊಂಡಂಗೇರಿ, ಒಂಟಿಅಂಗಡಿ, ಅಮ್ಮತ್ತಿ, ಕದನೂರು, ಬಿಟ್ಟಂಗಾಲ, ಕಾಕೋಟು ಪರಂಬು ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಬಿರುಸಿನ ಮತದಾನವಾಯಿತು.
ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ತಿತಿಮತಿ ಭಾಗದ ರೇಷ್ಮೆಹಡ್ಲು, ಮಜ್ಜಿಗೆ ಹಳ್ಳ, ಚೆನ್ನಂಗಿ, ಭದ್ರಗೋಳ, ಚೊಟ್ಟೆಪಾರೆ, ತಾಳಿಕಟ್ಟೆ, ಕಾರೆಹಡ್ಲು, ದೇವಮಚ್ಚಿ ಹೀಗೆ ಹಲವು ಹಾಡಿಯ ಮಂದಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರು. ಹಾಡಿಯ ಪ್ರತಿ ಮತದಾರರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತಹಕ್ಕು ಚಲಾಯಿಸಿದ್ದು ಕಂಡು ಬಂತು.
ವಿರಾಜಪೇಟೆ ತಾಲ್ಲೂಕಿನ ಹಲವು ಮತಗಟ್ಟೆಗಳಲ್ಲಿ ತಮ್ಮ ಮಕ್ಕಳು/ಮೊಮ್ಮಕ್ಕಳ ಸಹಾಯದೊಂದಿಗೆ ಹಿರಿಯರು ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿದ್ದು ಕಂಡುಬಂತು. ಹಲವು ಕಡೆಗಳಲ್ಲಿ ಹೊಸ ಮತದಾರರು ಹಕ್ಕು ಚಲಾಯಿಸಿದರು.
ರೇಷ್ಮೆಹಡ್ಲು ಮತಗಟ್ಟೆಯಲ್ಲಿ 80 ವರ್ಷ ಮೇಲ್ಪಟ್ಟ ಮಹಿಳೆಯರು ಮಕ್ಕಳ ಸಹಕಾರದಿಂದ ಮತಗಟ್ಟೆಗೆ ತೆರಳಿ ಉತ್ಸಾಹದಿಂದ ಮತಹಕ್ಕು ಚಲಾಯಿಸಿದ್ದು ಕಂಡುಬಂದಿತು.
ಒಂಟಿಅಂಗಡಿ ಮತಗಟ್ಟೆಯಲ್ಲಿ ವಿಕಲಚೇತನರೊಬ್ಬರು ಮಕ್ಕಳ ಸಹಕಾರದಿಂದ ಮತದಾನ ಮಾಡಿದರು. ಚುನಾವಣಾ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದು. ಆ ನಿಟ್ಟಿನಲ್ಲಿ ತಪ್ಪದೆ ಮತದಾನ ಮಾಡುತ್ತಿದ್ದೇನೆ ಎಂದರು.
ಎರಡನೇ ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಎಲ್ಲಾ ಮತಗಟ್ಟೆಗಳಲ್ಲಿ ಥರ್ಮೋ ಸ್ಕ್ಯಾನರ್ ಮೂಲಕ ಮತದಾರರನ್ನು ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತು. ಜತೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು, ಹಾಗೆಯೇ 4 ರಿಂದ 5 ಗಂಟೆ ಅವಧಿಯಲ್ಲಿ ಕೋವಿಡ್-19 ಶಂಕಿತರಿಗೆ ಮತಹಕ್ಕು ಚಲಾಯಿಸಲು ಅವಕಾಶ ನೀಡಲಾಗಿತ್ತು.
ಮತದಾನ ದಿನವಾದ ಭಾನುವಾರ ಬೆಳಗ್ಗೆ 9 ಗಂಟೆ ವೇಳೆಗೆ ಶೇ.12.42 ರಷ್ಟು ಮತದಾನವಾಗಿತ್ತು. ಬೆಳಗ್ಗೆ 11 ಗಂಟೆ ವೇಳೆಗೆ ಶೇ.30.07 ರಷ್ಟು ಮತದಾನವಾಗಿತ್ತು, ಹಾಗೆಯೇ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.47.42 ರಷ್ಟು ಮತದಾನವಾಗಿತ್ತು, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.58.63 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ವಿರಾಜಪೇಟೆ ತಹಶೀಲ್ದಾರ್ ಯೋಗಾನಂದ ಮತ್ತು ಸೆಕ್ಟರ್ ಅಧಿಕಾರಿ ಎ.ಎಂ.ಶ್ರೀಧರ ಅವರು ಬಿಟ್ಟಂಗಾಲ, ಕದನೂರು ಕಾಕೋಟು ಪರಂಬು ಸೇರಿದಂತೆ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ವಿರಾಜಪೇಟೆ ತಾಲೂಕಿನ ಅಮ್ಮತ್ತಿ ವಾರ್ಡ್‍ನ ಅಭ್ಯರ್ಥಿ ಪ್ರಥಮ್ ಕರುಂಬಯ್ಯ ಅವರು ತಮ್ಮ ಚಿಹ್ನೆಯಾದ ಆಟೋರಿಕ್ಷಾವನ್ನು ಮಕ್ಕಳ ಆಟಿಕೆ ಆಟೋ ರಿಕ್ಷಾ ಪ್ರದರ್ಶಿಸಿ ಮತಯಾಚಿಸುವ ಮೂಲಕ ಗಮನ ಸೆಳೆದರು.

error: Content is protected !!