ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ

27/12/2020

ಮಡಿಕೇರಿ ಡಿ.27 : ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಶ್ರದ್ಧಾಭಕ್ತಿಯಿಂದ ಧಾರ್ಮಿಕ ಕಾರ್ಯಗಳು ನೆರವೇರುತ್ತಿವೆ.
ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಪುಣ್ಯಾಹ, ಪ್ರಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, ಅಂಕುರಾರ್ಪಣೆ, ಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, (ಚತುಃಶುದ್ಧಿ, ಪಂಚಕ ಧಾರೆ) ಬಿಂಬ ಶುದ್ಧಿ ಕಲಶಾಭಿಷೇಕ, ಅಂಕುರ ಪೂಜೆ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಹೋಮ ಕಲಶಾಭಿಷೇಕಗಳು, ದುರ್ಗಾ ನಮಸ್ಕಾರ ಪೂಜೆ, ಅಂಕುರ ಪೂಜೆ ಮೊದಲಾದ ವಿಧಿ ವಿಧಾನಗಳು ಮೊದಲ ಎರಡು ದಿನಗಳ ಕಾಲ ನಡೆಯಿತು.
ಶ್ರೀಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ, ಪ್ರಮುಖರಾದ ಜಿ.ರಾಜೇಂದ್ರ, ಬಿ.ಎಂ.ಎಲ್ಲಪ್ಪ, ಉದಯಕುಮಾರ್, ಪ್ರಕಾಶ್ ಆಚಾರ್ಯ, ದಮಯಂತಿ, ಸಂಪತ್ ಕುಮಾರ್ ಮತ್ತಿತರರು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡಿದ್ದರು.
ಡಿ.31 ರಂದು ಬ್ರಹ್ಮಕಲಶಾಭಿಷೇಕದೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ತೆರೆ ಬೀಳಲಿದೆ.